ಬೆದ್ರದಲ್ಲೀಗ ನಾಯಕರು ಯಾರೆನ್ನುವುದೇ ಗೊಂದಲ.ನಾಯಕನನ್ನು ಹುಡುಕುತ್ತಾ ಹೋದರೆ ಕಾಣ ಸಿಗುವುದು ಮಿತ್ತಬೈಲು ವಾಸುದೇವ ನಾಯಕ್. ಆ ಲೋಕಲ್ ನಾಯಕನೇ ಕಂದಾಯ ನಿರೀಕ್ಷಕ ಮಂಜುನಾಥ್ ಅವರ ವರ್ಗಾವಣೆ ಹಿಂದಿರುವ ನಾಯಕನೆಂಬ ಗುಸುಗುಸು ಸುದ್ಧಿ ಬೆದ್ರದಾದ್ಯಂತ ಹರಡುತ್ತಿದೆ.
ಏಳೆಂಟು ತಿಂಗಳ ಹಿಂದೆ ಇದೇ ಮಂಜುನಾಥ್ ಅವರ ವರ್ಗಾವಣೆ ಆದೇಶ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೇ ಅದಕ್ಕೆ ಬ್ರೇಕ್ ಹಾಕಿದ್ದರು.
ಇದೀಗ ಮತ್ತೆ ಅವರ ವರ್ಗಾವಣೆ ಆದೇಶ ಹೊರಬಿದ್ದಿದ್ದು ಶುಕ್ರವಾರ ಬೆದ್ರದಿಂದ ರಿಲೀವ್ ಆಗಬೇಕಿದೆ.
ವಾಸುದೇವ ನಾಯಕ್ ಕಾಂಗ್ರೆಸ್ ನ ಹಿರಿಯ ಮುಖಂಡ. ಪಾಲಡ್ಕ ಪರಿಸರದಲ್ಲಿರುವ ಅವರ ಆತ್ಮೀಯರ ಮಣ್ಣು ಸಾಗಾಟದ ಜಾಗಕ್ಕೆ ಸಂಬಂಧಿಸಿ ಇದೇ ಮಂಜುನಾಥ್ ಮತ್ತು ಅವರ ನಡುವೆ ಜಟಾಪಟಿ ನಡೆದಿತ್ತು.ಅದು ಏಕವಚನದ ಹಂತಕ್ಕೂ ತಲುಪಿತ್ತು.
ಹಿರಿಯ ನಾಯಕನಾಗಿರುವ ನನಗೆ ಮಂಜುನಾಥ್ ಅವರು ತಪ್ಪಿ ಮಾತನಾಡಿದ್ದಾರೆ, ಅತ್ಯಂತ ಕೆಟ್ಟ ಶಬ್ಧಗಳಿಂದ ಸಾರ್ವಜನಿಕರೆದುರು ನಿಂದಿಸಿದ್ದಾರೆನ್ನುವುದು ವಾಸುದೇವ ನಾಯಕ್ ಅವರ ಆರೋಪ.
ಆದರೆ ಇದೇ ಆರೋಪಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನವರೇ ಆಗಿರುವ ಕೆಲವರು ‘ ಮಂಜುನಾಥ್ ಅವರ ಕರ್ತವ್ಯವನ್ನು ನಿರ್ವಹಿಸಿದ್ದಾರೆ’ ಎಂದು ಮಂಜುನಾಥ್ ಪರ ವಾದಿಸುತ್ತಾರೆ.ಅಲ್ಲದೆ ಮಂಜುನಾಥ್ ಅವರನ್ನು ಮತ್ತೆ ಇಲ್ಲಿಯೇ ಮುಂದುವರಿಸಬೇಕೆಂದೂ ಇಂದು ಕಾಂಗ್ರೆಸ್ ವಕ್ತಾರರಾಗಿರುವ ರಾಜೇಶ್ ಕಡಲಕೆರೆ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಶುಕ್ರವಾರ ಮಂಜುನಾಥ್ ಅವರ ರಿಲೀವ್ ಆಗದಿದ್ದರೆ 94 ಸಿ. ಸಹಿತ ಕೆಲವು ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತೇನೆ,ಅವರೊಂದಿಗೆ ಯಾರ್ಯಾರೆಲ್ಲಾ ಸೇರಿಕೊಂಡಿದ್ದಾರೋ ಅವರೆಲ್ಲರ ಹೆಸರು ಬಹಿರಂಗಗೊಳಿಸುತ್ತೇನೆ’ ಎಂದು ವಾಸುದೇವ ನಾಯಕ್ ಅವರು ಎಚ್ವರಿಸಿದ್ದಾರೆ.
ಮಂಜುನಾಥ್ ಬೇಕು ಮತ್ತು ಬೇಡ ಎಂದು ಎರಡು ಗುಂಪು ಆಗಿ ಹೇಳುವುದು ಕಾಂಗ್ರೆಸಿಗರೇ ಆಗಿರುವುದರಿಂದ ಗೊಂದಲ ಸೃಷ್ಟಿಯಾಗಿದೆ.
ಹಾಗೆ ನೋಡಿದರೆ ವರ್ಗಾವಣೆ ಆದೇಶ ಆಗಿ ಐದು ವರ್ಷ ದಾಟಿದವರೂ ಇಲ್ಲಿದ್ದಾರೆ,ಅವರನ್ನು ಮೊದಲು ಕಳುಹಿಸಿ ಎಂದು ಹೇಳುವವರು ಕೂಡಾ ಇದ್ದಾರೆ.
ಒಬ್ಬ ಅಧಿಕಾರಿಯನ್ನು ಉಳಿಸಬೇಕು ಮತ್ತು ಕಳಿಸಬೇಕು ಎಂದು ಕಾಂಗ್ರೆಸ್ಸಲ್ಲೇ ಎರಡು ಗುಂಪುಗಳಾಗಿ ಪಕ್ಷದೊಳಗೇ ಪನೀತ್ ರಾಜಕೀಯ ಶುರುವಾಗಿದೆ.
ಸಂಗತಿ ಹೀಗಿದ್ದರೂ ಕಂದಾಯ ನಿರೀಕ್ಷಕ ಮಾತ್ರ ‘ ಸರಕಾರದ ಆದೇಶ ಅಲ್ವಾ, ಹೋಗಲೇಬೇಕು’ ಎಂದು ಸಣ್ಣದಾದ ತೆಲಿಕೆಯಿಂದ ಹೇಳುತ್ತಾರೆ.











