ನಿನ್ನೆಯಿಂದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರ ವಿರುದ್ಧ ಕೆಲವು ಮಾಧ್ಯಮಗಳಲ್ಲಿ ಬೊಬ್ಬೆ ಕೇಳುವುದು ನೋಡಿದರೆ ‘ ಇವರು ಹೀಗೆನಾ’? ಅಂತ ಜನಸಾಮಾನ್ಯರಲ್ಲಿ ಸಂದೇಶ್ ಅವರ ವಿರುದ್ಧ ಅನುಮಾನ ಮೂಡದಿರಲು ಸಾಧ್ಯವಿಲ್ಲ. ಅದನ್ನೇ ಕೆಲವು ಕೆಲಸವಿಲ್ಲದ ಉಂಡಾಡಿಗುಂಡರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತಾವು ಭಯಂಕರ ಸುಬಗರು ಎಂಬಂತೆ ಪೋಸು ನೀಡಿದ್ದಾರೆ.
ಕೈಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ ಎಂಬ ಮಾತಿದೆ. ಅಲ್ಲದೆ ಕೈಲಾಗದವರು ಮೈ ಪರಚಿಕೊಂಡರು ಎಂಬ ಮಾತೂ ಇದೆ. ಇಲ್ಲಿ ಕೈಲಾಗದವರು ಮೈ-ಕೈ, ಕಾಲು , ಮಂಡೆ-ಕುಂಡೆ ಎಲ್ಲವನ್ನೂ ಪರಚಿಕೊಂಡಿದ್ದಾರೆ.

ಸತ್ಯ ಸಂಗತಿ ಏನೆಂದು ಸಂದೇಶ್ ವಿರುದ್ಧ ಕಳೆದ ಕೆಲ ಸಮಯಗಳಿಂದ ಆರೋಪಗಳನ್ನು ಮಾಡುತ್ತಲೇ ಬಂದಿರುವ ಸುಮತಿ ನಾಯ್ಕ್ ಎಂಬಾಕೆಯ ಸ್ವತಃ ಸಹೋದರಿಯಾಗಿರುವ ಪ್ರಫುಲ್ಲಾ ನಾಯ್ಕ್ ಅವರು ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಸತ್ಯ ಸಂಗತಿಯನ್ನು ವಿವರಿಸಿದ್ದಾರೆ.
ಅವರಿಬ್ಬರ ನಡುವೆ ಅಂದರೆ ಅಕ್ಕ ತಂಗಿಯರ ನಡುವಿನ ಫ್ಯಾಮಿಲಿ ಮ್ಯಾಟರಲ್ಲಿ ಸಂದೇಶ್ ಅವರು ಸುಮತಿ ನಾಯ್ಕ್ ಪರ ಇರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಇಷ್ಟೆಲ್ಲಾ ಬೊಬ್ಬೆಗಳು. ಆ ಸುಮತಿ ನಾಯ್ಕ್- ಪ್ರಫುಲ್ಲಾ ನಾಯ್ಕ್ ನಡುವಿನ ವಿವಾದ ಏನು, ಅಂದು ನಡೆದ ಘಟನೆ ಏನು ಎನ್ನುವುದನ್ನು ಸಂದೇಶ್ ಅವರು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಇದು ಕಳೆದೊಂದು ವರ್ಷದಿಂದ ನಡೆಯುತ್ತಲೇ ಇದೆ- ಒಂಥರಾ ಚಿಂಗಮ್ ನಂತೆ!
ಸಂದೇಶ್ ಪಿ.ಜಿ.ಅವರು ಮೂಡುಬಿದಿರೆ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಏನೆಲ್ಲಾ ಬದಲಾವಣೆಯಾಗಿದೆ,ಅಪರಾಧ ಚಟುವಟಿಕೆಗಳು ಯಾವ ರೀತಿ ನಿಯಂತ್ರಣವಾಗಿದೆ ಎನ್ನುವುದು ಬೆದ್ರದ ಜನರಿಗೆ ಗೊತ್ತಿದೆ.ಅದನ್ನು ಮತ್ತೆ ಇಲ್ಲಿ ಹೇಳುವ ಅಗತ್ಯವಿಲ್ಲ.
ಈ ನಡುವೆ ಮತ್ತೊಂದು ಪ್ರಕರಣ ದಾಖಲಾಗುತ್ತದೆ. ವಂಚನೆ ಪ್ರಕರಣವದು.ಆ ವ್ಯಕ್ತಿಯನ್ನು ಠಾಣೆಗೆ ಎಳೆತಂದಿರುವುದೂ ಸತ್ಯ. ಆದರೆ ಆತನ ಹೆಂಡತಿಗೂ, ಸುಮತಿ ನಾಯ್ಕ್ ಗೂ ಪರಿಚಯವಾಗಿ ಇಬ್ಬರೂ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಹೊರಿಸಿ ರಾಜಧಾನಿವರೆಗೂ ಹೋಗಿದ್ದಾರೆಯೇ ವಿನಹ ಎಲ್ಲೂ ಕಂಪ್ಲೇಂಟು ಕೊಡಲಿಲ್ಲ.
ಮಾಧ್ಯಮಗಳಲ್ಲೇ ರಂಪಾಟ ನಡೆದಿರುವುದು ಬಿಟ್ಟರೆ ಅನ್ಯಾಯವಾಗಿದೆಯೆಂದು ಆರೋಪಿಸಿದವರೆಲ್ಲಾ ಎಲ್ಲೂ ಲಿಖಿತವಾದ ದೂರನ್ನು ನೀಡಿರಲಿಲ್ಲ ಎನ್ನಲಾಗುತ್ತಿದೆ.
ಸಂದೇಶ್ ಅವರು ಡೋಂಟ್ ಕೇರ್ ಮನುಷ್ಯ.ಕಾನೂನು ಬಿಟ್ಟು ಹೋಗುವವರಲ್ಲ, ಕಾನೂನು ಕೈಗೆತ್ತಿಕೊಳ್ಳುವವರನ್ನು ಬಿಡುವುದೂ ಇಲ್ಲ. ಸ್ವಲ್ಪ ಖಡಕ್ ಅಸಾಮಿ.ಹಾಗಾಗಿ ಕೆಲವರಿಗೆ ಇದು ಸಹಿಸಲಾಗುತ್ತಿಲ್ಲ. ಅವರಿಗೆ ಇಲಾಖೆಯಲ್ಲೂ,ಸಾರ್ವಜನಿಕವಾಗಿಯೂ ಒಳ್ಳೆಯ ಹೆಸರಿದೆ.ಇದನ್ನು ಕೆಲ ‘ಫಲಾನುಭವಿಗಳಿಗೆ( ಅವರಿಂದ ಬೇರೆ ಬೇರೆ ವಿಷಯಗಳಿಗೆ ಪೆಟ್ಟು ತಿಂದವರು) ತಡೆದುಕೊಳ್ಳಲಾಗುತ್ತಿಲ್ಲ. ಅನ್ಯಾಯ ಮಾಡಿದವರಿಗೆ ಲಾಠಿ ರುಚಿ ತೋರಿಸಲೇಬೇಕು.ಅದುಬಿಟ್ಟು ಠಾಣೆಯಲ್ಲಿ ಕೂರಿಸಿ ಸನ್ಮಾನ ಮಾಡಲಿಕ್ಕಾಗುತ್ತದಾ?
ಹೀಗೆ ಸಂತ್ರಸ್ತರೆಂದು ಹೇಳಿಕೊಂಡವರ ಬಳಗಕ್ಕೆ ಮತ್ತಷ್ಟು ಜನ ಸೇರ್ಪಡೆಯಾಗಿ ಒಂದು ತಂತ್ರಗಾರಿಕೆಯ ಟೀಮು ಸಂದೇಶ್ ಅವರನ್ನು ಸಸ್ಪೆಂಡ್ ಮಾಡಲೇಬೇಕೆಂದು ಕಳೆದೊಂದು ವರ್ಷದಿಂದ ಪರಚಿಕೊಳ್ಳುತ್ತಲೇ ಇದ್ದಾರೆ.
ಮಾಧ್ಯಮಗಳೂ ಇವರ ಎಲ್ಲಾ ಆರೋಪಗಳೂ ಸತ್ಯವೆಂದು ನಂಬಿ ಬೊಬ್ಬೆ ಹಾಕಿದೆ. ಸತ್ಯ ಸಂಗತಿ ಬೇಗ ಹರಡಲ್ಲ, ಸುಳ್ಳು ಕೆಲವೊಮ್ಮೆ ಹೈಸ್ಪೀಡ್ ಪಡೆಯುತ್ತದೆ ಎನ್ನುವುದಕ್ಕೆ ನಿನ್ನೆಯಿಂದ ಕೇಳಿ ಬರುವ ಬೊಬ್ಬೆಗಳೇ ಸಾಕ್ಷಿ.
ಇದರ ಹಿಂದೆ ಇನ್ನೂ ಕೆಲವು ದಂಡಪಿಂಡಗಳು ಸೇರಿಕೊಂಡಿರಬಹುದು. ಆದರೆ ಖಡಕ್ ಅಧಿಕಾರಿ, ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ತಂಡವು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಸತ್ಯ ಗೊತ್ತಾಗಲಿ.
ಯಾರೆಲ್ಲಾ ಈ ಸಿಂಗಮನ್ನು ಚಿಂಗಮ್ ಅಂತ ಪಿರಾವುಡೇ ವ್ಯಂಗ್ಯವಾಡಿದ್ದರೋ ಆ ಚಿಂಗಮ್ ಗಳಿಗೂ ಸತ್ಯ ಅರಿವಾಗಲಿ.
ಸಂದೇಶ್ ವಿರುದ್ಧ ತಂತ್ರಿಗಳ ಟೀಮೊಂದು ಆರೋಪ ಮಾಡುತ್ತಿದೆ,ಆದರೆ ಅವರ ಪರವಾಗಿ ಬಹುದೊಡ್ಡ ತಂಡವೊಂದು ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದೆ.
ಚಿಂಗಮ್ ಕೆಲವೊಮ್ಮೆ ಅಂಟಿಕೊಳ್ಳುತ್ತದೆ.ಈಗ ಕೆಲವು ಸಂಖ್ಯೆಗಳ ಚಿಂಗಮ್ ಗಳು ಸಂದೇಶ್ ಸುತ್ತ ಅಂಟಿಕೊಂಡಿದೆಯಷ್ಟೆ !










