ಮಹಿಳೆಯರ ಮೇಲೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಎಸಗಿದ್ದಾರೆನ್ನಲಾದ ಆರೋಪಗಳ ತನಿಖೆಯನ್ನು ಸಿ.ಐ.ಡಿ.ಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಸೂಚಿಸಿದ್ದಾರೆ.
ಸಂದೇಶ್ ಅವರಿಂದ ದೌರ್ಜನ್ಯ ನಡೆದಿದೆ ಎಂದು ಇತ್ತೀಚೆಗೆ ಮಹಿಳೆಯರಿಬ್ಬರು ಆರೋಪಿಸಿದ್ದರು. ಅದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.ಆ ಪ್ರಕರಣದ ಕುರಿತು ತನಿಖೆ ನಡೆಸಿದ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ , ಎಸಿಪಿ ಶ್ರೀಕಾಂತ್ ಅವರು ಮಹಿಳೆಯರು ಆರೋಪಿಸಿದ್ದ ಆರೋಪಗಳೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.
ಇದಾದ ಬಳಿಕ ಮತ್ತೊಬ್ಬ ಮಹಿಳೆ ಸಂದೇಶ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಇದೀಗ ಎಲ್ಲ ಪ್ರಕರಣಗಳನ್ನೂ ಸಿಐಡಿ ತನಿಖೆ ನಡೆಸಲಿದೆ. ವಿಶೇಷ ತನಿಖಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ.










