ಮೂಡುಬಿದಿರೆ ಬಸ್ಸು ನಿಲ್ದಾಣದ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಎದುರಿನ ವಾಹನ ಪಾರ್ಕಿಂಗ್ ಕಿರಿಕಿರಿಯನ್ನು ಪುರಸಭೆಯವರಿಗೆ ಸರಿಮಾಡಲು ಸಾಧ್ಯವೇ ಆಗಲಿಲ್ಲ. ಅದು ಕಳೆದ ಹಲವು ಸಮಯಗಳ ನಿತ್ಯದ ಪ್ರಾಬ್ಲೆಮ್.
ಅದೆಷ್ಟು ಸಲ ಮೀಟಿಂಗ್ ಆದರೂ , ಪೊಲೀಸ್ ಸಿಬ್ಬಂದಿಯ ನೇಮಕವಾದರೂ, ವಾಚ್ ಮೆನನ್ನು ನೇಮಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ.
ಅಲ್ಲಿ ಬಸ್ಸುಗಳು ನಿಲ್ಲಬೇಕು.ಆದರೆ ದ್ವಿಚಕ್ರ ಮತ್ತು ಇತರ ವಾಹನಗಳ ರಾಶಿಯೇ ಅಲ್ಲಿ ಹೆಚ್ಚು ಕಾಣಸಿಗುತ್ತದೆ.
ಕೆಲವೊಮ್ಮೆ ಈ ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್, ಕಾರು ಮತ್ತು ಇತರ ವಾಹನಗಳ ಕಿರಿಕಿರಿಯಿಂದಾಗಿ ಕೆಲವು ಬಸ್ಸುಗಳು ಪೀಂಕನ್ ಕ್ರಾಸ್ ಮಾಡಿ ಕಷ್ಟದಲ್ಲಿ ನಿಲ್ಲಿಸಿದ್ದೂ ಇದೆ.
ಈ ಎಲ್ಲಾ ಸಮಸ್ಯೆಗಳ ಕುರಿತು ಈ ವಾಣಿಜ್ಯ ಸಂಕೀರ್ಣದ ವ್ಯಾಪಾರಸ್ಥರು ಪುರಸಭೆಯವರಿಗೆ ಸಲ್ಲಿಸಿದ ಮನವಿಗಳು ಅಷ್ಟಿಷ್ಟಲ್ಲ. ಆದರೆ ಯಾವ ಪ್ರಯೋಜನವೂ ಆಗದೆ ತಿಂಗಳಿಗೆ ಲಕ್ಷಗಟ್ಟಲೆ ಬಾಡಿಗೆ ಕಟ್ಟುವ ವ್ಯಾಪಾರಸ್ಥರಿಗೆ ಅನ್ಯಾಯವಾದದ್ದೇ ಹೆಚ್ಚು.
ಅನ್ಯಾಯ ಹೇಗೆಂದರೆ ಇಲ್ಲಿ ನಿಲ್ಲಬೇಕಾದ ಕೆಲವು ಬಸ್ಸುಗಳ ನಿಲುಗಡೆ ಇಲ್ಲ. ಕೆಲವೇ ಬಸ್ಸುಗಳ ನಿಲುಗಡೆಯಾದರೂ ಇತರ ವಾಹನಗಳ ಪಾರ್ಕಿಂಗ್ ಕಿರಿಕಿರಿ. ಹಾಗಾಗಿ ಅಂಗಡಿಗಳಿಗೆ ಹೋಗಬೇಕಾದ ಗ್ರಾಹಕರಿಗೂ ಗೊಂದಲ. ಈ ಗೊಂದಲದಿಂದಾಗಿ ಗ್ರಾಹಕರು ಅಂಗಡಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳಿಗೆ ಗ್ರಾಹಕರು ಹೋಗದೆ ವ್ಯಾಪಾರವಾದರೂ ಹೇಗೆ ಸಾಧ್ಯ ?
ತಿಂಗಳಿಗೆ ದುಬಾರಿ ಬಾಡಿಗೆ ಕಟ್ಟಬೇಕು. ಈ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳವರು ತಿಂಗಳಿಗೆ ಒಟ್ಟು 4,35,381 ರೂ. ಬಾಡಿಗೆ ಕಟ್ಟುತ್ತಾರೆ. ಇಷ್ಟು ದೊಡ್ಡ ಬಾಡಿಗೆ ಪುರಸಭೆಗೆ ಹೋಗುತ್ತಿದ್ದರೂ ಅಂಗಡಿಯವರಿಗೆ ಅನ್ಯಾಯವಾದರೆ ಹೇಗೆ ?
ಈಗ ಮತ್ತೊಂದು ಸಮಸ್ಯೆ ಶುರುವಾಗಿದೆ.ನಾಳೆಯಿಂದ ಅಂದರೆ ಎಪ್ರಿಲ್ ಒಂದರಿಂದ ಈ ಸಂಕೀರ್ಣದ ಎದುರು ನಿಲ್ಲುತ್ತಿದ್ದ ಬಸ್ಸುಗಳನ್ನು ಇಲ್ಲಿಂದ ತೆರವುಗೊಳಿಸಿ ಇಲ್ಲಿ ಕೇವಲ ಟೈಮಿಂಗ್ಸ್ ಎಡ್ಜೆಸ್ಟ್ ಮೆಂಟ್ಗಾಗಿ ಮಾತ್ರ ಕೆಲವು ಬಸ್ಸುಗಳನ್ನು ನಿಲ್ಲಿಸುವುದೆಂದು ಬಸ್ಸು ಮಾಲಕರು ನಿರ್ಧರಿಸಿದ್ದಾರಂತೆ.ಅದು ಅವರ ಸ್ವಯಂ ನಿರ್ಧಾರ.ಹೀಗಾದರೆ ಈ ಸಂಕೀರ್ಣದ ಎದುರು ಬರುವ ಜನರ ಸಂಖ್ಯೆ ಮತ್ತೂ ಕಡಿಮೆಯಾಗುತ್ತದೆ.
ಆದರೆ ಈ ರೀತಿಯ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬಸ್ಸುಮಾಲಕರಿಗೆ ಇದೆಯಾ ಅಥವಾ ಪುರಸಭೆಗಾ ? ಎನ್ನುವುದು ಇಲ್ಲಿನ ಅಂಗಡಿ ಮಾಲಕರ ಪ್ರಶ್ನೆ.
ಇದೇ ಪ್ರಶ್ನೆಯನ್ನಿಟ್ಟುಕೊಂಡು ತಮಗಾದ ಅನ್ಯಾಯ, ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಅಂಗಡಿ ಮಾಲಕರು ಮತ್ತೊಮ್ಮೆ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ.










