ನೆಲ್ಲಿಕಾರು ಪರಿಸರದ 70 ವರ್ಷದ ಮಹಿಳೆಯೋರ್ವರು ಬಾವಿಗೆ ಬಿದ್ದು ಇದೀಗ ಆಸ್ಪತ್ರೆಯಲ್ಲಿದ್ದರೆ ಅದೇ ಪರಿಸರದ ರಿಕ್ಷಾ ಚಾಲಕನೋರ್ವ ರೆಂಜಾಳದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದು ಬಂದಿದೆ.
ನೆಲ್ಲಿಕಾರಿನ ರಿಕ್ಷಾ ಚಾಲಕ ಸತೀಶ್ ಶೆಟ್ಟಿ ( 45) ಆತ್ಮಹತ್ಯೆ ಮಾಡಿಕೊಂಡವ. ಅದೇ ಪರಿಸರದ ಪದ್ಮಾವತಿ ( 70) ಎಂಬವರು ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಪದ್ಮಾವತಿ ಅವರು ಮನೆಯಲ್ಲಿ ಒಬ್ಬರೇ ಇರುವುದರಿಂದ ಅವರಿಗೆ ಬೇಕಾದ ಮನೆ ಸಾಮಾಗ್ರಿಗಳು ಮತ್ತು ಅವರನ್ನು ಕರೆದೊಯ್ಯಲು ಸತೀಶ್ ಶೆಟ್ಟಿ ಅವರ ರಿಕ್ಷಾವನ್ನೇ ಕರೆಯುತ್ತಿದ್ದರೆನ್ನಲಾಗಿದ್ದು ಅವರಿಬ್ಬರೂ ಒಂದೇ ಊರಿನವರಾಗಿದ್ದರಿಂದ ಪರಸ್ಪರ ಆತ್ಮೀಯತೆಯಿಂದ ಇದ್ದರೆನ್ಮಲಾಗಿದೆ.ಅಲ್ಲದೆ ಸಂಜೆ ವೇಳೆಗೆ ಅವರಿಬ್ಬರೂ ಒಟ್ಟಿಗೆ ಕುಡಿಯುತ್ತಿದ್ಧರೆಂದೂ ತಿಳಿದು ಬಂದಿದೆ.
ಮೊನ್ನೆ ಗುರುವಾರ ಸಂಜೆ ಕೂಡಾ ಇಬ್ಬರೂ ಒಟ್ಟಿಗೆ ಕುಡಿದಿದ್ದಾರೆ.ಆದರೆ ಶುಕ್ರವಾರ ಬೆಳಿಗ್ಗೆ ಪದ್ಮಾವತಿ ಅವರು ಬಾವಿಯಲ್ಲಿದ್ದು ಅವರನ್ನು ಮೇಲಕ್ಕೆತ್ತಲಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ತ ಸತೀಶ್ ಶೆಟ್ಟಿ ನಾಪತ್ತೆಯಾಗಿದ್ದು ಇಂದು ಆತನ ಶವ ರೆಂಜಾಳದ ಹಾಡಿಯಲ್ಲಿ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ನಿಜವಾದ ಕಾರಣ ಏನೆನ್ನುವುದು ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಗುಣಮುಖರಾದ ಬಳಿಕ ಪದ್ಮಾವತಿ ಅವರ ಹೇಳಿಕೆಯೇ ಎಲ್ಲವನ್ನೂ ತಿಳಿಸಲಿದೆ.
ಮೂಡುಬಿದಿರೆ ಮತ್ತು ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.





