“ಮೂಡುಬಿದಿರೆ ಮಾತ್ರವಲ್ಲ, ರಾಜ್ಯದ ಹೆಚ್ಚಿನ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಮಡಿಲಿಗೆ ಹಾಕಲು ಒಪ್ಪಂದ ನಡೆದಿದೆ, ಇದು ಸರಿಯಲ್ಲ, ಸರಕಾರಿ ಆಸ್ಪತ್ರೆಗಳು ಸರಕಾರದ ಅಧೀನದಲ್ಲೇ ಇರಬೇಕು, ಮೇಲ್ದರ್ಜೆಗೇರಬೇಕಿರುವುದನ್ನು ಮೇಲ್ದರ್ಜೆಗೇರಿಸಬೇಕು, ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳನ್ನು ಹಾಕಬೇಕು, ಬಡ ಜನರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಮಾಡಬೇಕು, ಅದು ಬಿಟ್ಟು ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸರಕಾರದ ಒಪ್ಪಂದವನ್ನು ಕೂಡಲೇ ಕೈ ಬಿಡಬೇಕು ” ಎಂದು ಸಿಪಿಐಎಂ ಮುಖಂಡರು ಹೋರಾಟಕ್ಕಿಳಿದು ವಿರೋಧ ವ್ಯಕ್ತಪಡಿಸುತ್ತಿದ್ದಾರೆಯೇ ವಿನಹ ಉಳಿದವರ್ಯಾರಿಗೂ ಸರಕಾರಿ ಆಸ್ಪತ್ರೆಗಳ ಬಗ್ಗೆಯಾಗಲೀ, ಬಡಜನರ ಬಗ್ಗೆಯಾಗಲೀ ಕಾಳಜಿ ಇದ್ದಂತಿಲ್ಲ.
ಈಗಾಗಲೇ ರಾಜ್ಯದ ಸಮುದಾಯ ಆಸ್ಪತ್ರೆಗಳನ್ನು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಯವರ ನಿಯಂತ್ರಣಕ್ಕೊಳಪಡಿಸುವ ಪ್ರಕ್ರಿಯೆಗಳಿಗೆ ಒಪ್ಪಂದ ನಡೆದಿದೆಯೆನ್ನಲಾಗುತ್ತಿದ್ದು ಅದರ ಪೂರ್ವಭಾವಿಯಾಗಿ ದ.ಕ.ಜಿಲ್ಲೆಯ ಮೂಡುಬಿದಿರೆ,ವಿಟ್ಲ,ಬೆಳ್ತಂಗಡಿ ಮತ್ತು ಬಂಟ್ವಾಳದ ಸರಕಾರಿ ಆಸ್ಪತ್ರೆಗಳನ್ನು ಪ್ರೈವೇಟ್ ಆಸ್ಪತ್ರೆಗಳ ಮಡಿಲಿಗೆ ಹಾಕಲು ಮುಂದಾಗಿದೆ. ಮೂಡುಬಿದಿರೆಯ ಸಮುದಾಯ ಆಸ್ಪತ್ರೆಯನ್ನು ಮಿಜಾರು ಬಳಿ ನಿರ್ಮಾಣವಾದ ಆಳ್ವಾಸ್ ನ ಹೊಸದಾದ ಮೆಡಿಕಲ್ ಕಾಲೇಜ್ ಗೆ ನೀಡುವ ಒಪ್ಪಂದ ನಡೆದಿದೆಯೆನ್ನಲಾಗುತ್ತಿದೆ.ಇದೇ ಕಾರಣಕ್ಕೆ ಸಿಪಿಐಎಂ ನ ವಿರೋಧಗಳು, ಪ್ರತಿಭಟನೆಗಳು ನಡೆಯುತ್ತಿದೆ. ಮೇ.14 ರಂದು ಈ ಕುರಿತಾಗಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಿಪಿಐಎಂ ಮುಂದಾಗಿದೆ.


ಮೂಡುಬಿದಿರೆ ಸಮುದಾಯ ಆಸ್ಪತ್ರೆಗೆ ಸುದೀರ್ಘ ವರ್ಷಗಳ ಇತಿಹಾಸವಿದೆ. ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿದ್ದ ಆಸ್ಪತ್ರೆಯಿದು. ಇಲ್ಲಿ ಹಲವು ಮಂದಿ ಖ್ಯಾತ ವೈದ್ಯರು ಒಳ್ಳೆಯ ಸೇವೆಯ ಮೂಲಕ ಹೆಸರು ಮಾಡಿದ್ದರೆ ಕೆಲವರು ಎಡವಟ್ಟಿನಿಂದಾಗಿ ಹೆಸರು ಕೆಡಿಸಿಕೊಂಡಿದ್ದರು .ಇಂದಿಗೂ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಜನರು ಇಲ್ಲಿಗೆ ಬರುತ್ತಾರೆ. ವೈದ್ಯರಿದ್ದಾರೆ, ಸಿಬ್ಬಂದಿಗಳಿದ್ದಾರೆ.ಕೆಲವೊಂದು ವ್ಯವಸ್ಥೆಗಳಾಗಬೇಕಷ್ಟೆ.
ಈ ಬಡವರ ಆಸ್ಪತ್ರೆ ಬಡವರಿಗಾಗಿ ಇರಬೇಕು, ಇಲ್ಲಿ ಕೆಲವೊಂದು ಚಿಕಿತ್ಸೆಗಳಿಗೆ ವ್ಯವಸ್ಥೆಗಳಾಗಬೇಕು, ಈ ಆಸ್ಪತ್ರೆಯಲ್ಲಿ ಇಲ್ಲಿನ ಸಿಬ್ಬಂದಿಗಳೇ ಇರಬೇಕು ವಿನಹ ಎಲ್ಲಿಂದಲೋ ಮೆಡಿಕಲ್ ಕಲಿಯಲು ಬರುವ ವಿದ್ಯಾರ್ಥಿಗಳು ಓಡಾಡುವಂತಾಗಬಾರದು.ಅಂದರೆ ಈ ಆಸ್ಪತ್ರೆ ಖಾಸಗಿಯವರ ಪಾಲಾಗಬಾರದು.
ದುಡ್ಡಿಲ್ಲದವರು, ಬಡವರು,ಅಶಕ್ತರು,ಅಸಹಾಯಕರು ಮಾತ್ರ ಇಲ್ಲಿಗೆ ಬರುತ್ತಾರೆ.ಇನ್ನು ಇದು ಖಾಸಗಿಯವರ ಅಧೀನದಲ್ಲಿದೆಯೆಂದು ಗೊತ್ತಾದರೆ ಬರುವವರೂ ಹಿಂಜರಿಯುತ್ತಾರೆ.ಅಂತವರ ಪಾಡೇನು ?
ಅಂದಹಾಗೆ, ಬಡಜನರ ಬಗ್ಗೆ ಕಾಳಜಿ ಇದೆ ಎಂದು ಬೊಬ್ಬಿಡುವವರೆಲ್ಲಾ ಎಲ್ಲಿ ಹೋಗಿದ್ದಾರೆ ?





