ಕಾಶಿಪಟ್ಣ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಸಮನ್ವಯವಾಗಿ ನೀಡುತ್ತಿರುವ ದಾರುನ್ನೂರ್ ಎಜುಕೇಶನ್ ಗೆ ದಶಮಾನೋತ್ಸವ ಸಂಭ್ರಮ.ನವಂಬರ್ 1,2 ಮತ್ತು 3 ರಂದು ಒಟ್ಟು ಮೂರು ದಿನಗಳಲ್ಲಿ ದಶಸಂಭ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ,ಧಾರ್ಮಿಕ ನೇತಾರರ ಸಹಿತ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ,ಅಲ್ಲದೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಅನೇಕ ರಾಜಕೀಯ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ ಎಂದು ದಾರುನ್ನೂರ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಡಿ.ಎ.ಉಸ್ಮಾನ್ ಏರ್ ಇಂಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ದ.ಕ.ಜಿಲ್ಲಾ ಖಾಝಿಯಾಗಿರುವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಪ್ರಸ್ತುತ ಈ ವಿದ್ಯಾಕೇಂದ್ರದಲ್ಲಿ 330 ರಷ್ಟು ವಿದ್ಯಾರ್ಥಿಗಳು ಧಾರ್ಮಿಕ ವಿದ್ಯಾಭ್ಯಾಸದೊಂದಿಗೆ ಲೌಕಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ,ಪ್ರಮುಖ ಭಾಷೆಗಳಾಗಿ ಕನ್ನಡ, ಹಿಂದಿ,ಇಂಗ್ಲಿಷ್, ಅರಬಿ,ಉರ್ದು ಹಾಗೂ ಮಲಯಾಳಂ ಭಾಷೆಗಳನ್ನೊಳಗೊಂಡ ಇತರ ಭಾಷೆಗಳಲ್ಲೂ ವಿದ್ಯಾಭ್ಯಾಸ ನೀಡಲಾಗುತ್ತಿದ್ದು ಸಕಲ ವ್ಯವಸ್ಥೆಗಳೊಂದಿಗೆ ವಸತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಗುರಿಯಂತೆ ಮುಂಬರುವ ದಿನಗಳಲ್ಲಿ ಹತ್ತು ಹಲವಾರು ಯೋಜನೆಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದು ಕರ್ನಾಟಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರ ವಿದ್ಯಾಭ್ಯಾಸದ ಅವಶ್ಯಕತೆ ಮತ್ತು ಅವರ ಬಯಕೆಯನ್ನು ಮನಗಂಡು ನಾವು ನಮ್ಮ ಮುಂದಿನ ಗುರಿಯಾಗಿ ದಾರುನ್ನೂರ್ ಮಹಿಳಾ ಶರೀಅತ್ ಕಾಲೇಜನ್ನು ತೆರೆಯಲುದ್ದೇಶಿಸಿದ್ದೇವೆ ಎಂದು ಮಾಹಿತಿ ನೀಡಿದರು.
ದಶಮಾನೋತ್ಸವ ಪ್ರಯುಕ್ತ ಪ್ರಥಮ ಸನದುದಾನ ನಡೆಯಲಿದ್ದು ನವೆಂಬರ್ 1 ರಂದು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ತೋಡಾರ್ ಮಖಾಂ ಝಿಯಾರತ್ ನೊಂದಿಗೆ ಚಾಲನೆಗೊಂಡು ಸಂಸ್ಥೆಯ ಕ್ಯಾಂಪಸ್ ವರೆಗೆ ವಾಹನ ಜಾಥ,ಸಂಸ್ಥೆಯ ಆವರಣದಲ್ಲಿ ಧ್ವಜಾರೋಹಣ ಹಾಗೂ ಮಗ್ರಿಬ್ ನಮಾಝ್ ಬಳಿಕ ಅಂತರಾಷ್ಟ್ರೀಯ ವಾಗ್ಮಿ ಅಲ್ ಹಾಫಿಳ್ ಅಹ್ಮದ್ ಕಬೀರ್ ಬಾಖವಿ ಕೇರಳ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.
ನವೆಂಬರ್ 2 ರಂದು ಬೆಳಿಗ್ಗೆ 9 ಕ್ಕೆ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನದಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿ ಮತ್ತು ಬೆಳವಣಿಗೆಯ ತರಬೇತಿ, ಯೂತ್ ಮೀಟ್,ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬ್ಯಾರಿ ಸಾಧಕರಿಗೆ ಸನ್ಮಾನ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಶಹೀದ್ ಸಿ.ಎಂ.ಉಸ್ತಾದ್ ಅವರ ಜೀವನ ಚರಿತ್ರೆಯ ಬಗ್ಗೆ ವಿವಿಧ ಸೆಮಿನಾರ್ ಗಳು ನಡೆಯಲಿದ್ದು ಅಸರ್ ನಮಾಝ್ ಬಳಿಕ ಅಸ್ಸಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ನೂತನ ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ.ಮಗ್ರಿಬ್ ನಮಾಝ್ ಬಳಿಕ ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಕೇರಳ ಅವರಿಂದ ಮುಖ್ಯ ಪ್ರಭಾಷಣ ಹಾಗೂ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್- ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.
ನವೆಂಬರ್ 3 ರಂದು ಬೆಳಿಗ್ಗೆ 9 ಕ್ಕೆ ಮಹಲ್ ಅಭಿವೃದ್ಧಿ, ನಾಯಕತ್ವ ಕುರಿತಂತೆ ಮಹಲ್ ಸಾರಥಿ ಸಂಗಮ, ಮಧ್ಯಾಹ್ನ 3 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಹಿತ ಹಲವು ಸಚಿವರು,ಶಾಸಕರು,ಸಾಮಾಜಿಕ,ಧಾರ್ಮಿಕ ಮತ್ತು ಸಾಂಸ್ಕೃತಿಕ ನಾಯಕರ ಉಪಸ್ಥಿತಿಯಲ್ಲಿ ಸೌಹಾರ್ದ ಸಂಗಮ ನಡೆಯಲಿದೆ.
ಮಗ್ರಿಬ್ ನಮಾಝ್ ಬಳಿಕ ಸನದುದಾನ ಮಹಾ ಸಮ್ಮೇಳನ ನಡೆಯಲಿದ್ದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಯಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಸನದುದಾನ ಪ್ರಧಾನ ಮಾಡಲಿದ್ದಾರೆ.ಬಳಿಕ ಅಂತರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದವರು ಹೇಳಿದರು. ಕಾರ್ಯಕ್ರಮದ ಮೊದಲ ದಿನ ವಿಜ್ಞಾನ, ತಂತ್ರಜ್ಞಾನ, ಪಾರಂಪರಿಕ ವಸ್ತುಗಳು,ವಿಸ್ಮಯಲೋಕ ,ಮೆಂಟಿಲಿಸಂ,ಗಣಿತ, ಎ.ಐ,ಸಮಸ್ತ ಪೆವಿಲಿಯನ್ ಮತ್ತು ಇತರ ವಿಶೇಷ ಆಕರ್ಷಣೆಗಳ “ದಾರುನ್ನೂರ್ ಎಕ್ಸ್ಪೋ” ಗೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಚಾಲನೆ ನೀಡಲಿದ್ದಾರೆ.
ದಾರುನ್ನೂರ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸಮದ್ ಹಾಜಿ,ಅದ್ದು ಹಾಜಿ,ಸಯ್ಯಿದ್ ಅಕ್ರಮ್ ಅಲೀ ತಂಙಳ್ ಅಂಗರಕರ್ಯ,ಹುಸೈನ್ ರಹ್ಮಾನಿ,ದಾರುನ್ನೂರ್ ಸಂಸ್ಥೆಯ ಪ್ರಾಂಶುಪಾಲರಾದ ಅಮೀನ್ ಹುದವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ದಾರುನ್ನೂರ್ ದಶಮಾನೋತ್ಸವ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಫಕೀರಬ್ಬ ಮಾಸ್ಟರ್ ಅವರು ಸ್ವಾಗತಿಸಿ ವಂದಿಸಿದರು.
