ಹಿರಿಯರನೇಕರಿಗೆ ಈ ಹೆಸರು ಖಂಡಿತಾ ನೆನಪಿದೆ.ಮೂಡುಬಿದಿರೆ ಮಸೀದಿ ಬಳಿ ಇವರ ಆಸ್ಪತ್ರೆ ಇದ್ದದ್ದು.ಜನತಾ ಕ್ಲಿನಿಕ್ ಅಂತ ಹೆಸರು. ಬಹುಶಃ ಜನತಾ ಕ್ಲಿನಿಕ್ ಗಿಂತಲೂ ಹೆಚ್ಚು ಫೇಮಸ್ ಆಗಿದ್ದದ್ದು ಡಾ.ಸುಧಾಕರ ಶೆಟ್ಟಿ ಎಂಬ ಹೆಸರು.
ಅಂದಿನ ದಿನಗಳಲ್ಲಿ ಡಾ.ಸುಧಾಕರ ಶೆಟ್ಟಿ, ರಾಮ್ ಭಟ್,ರತ್ನಾಕರ ಶೆಟ್ಟಿ, ಡಾ.ಮಲ್ಯ ಈ ಹೆಸರುಗಳೇ ಕೇಳಿಬರುತ್ತಿದ್ದದ್ದು. ನಿಮಗೆ ನೆನಪಿರಬಹುದು…ಮದ್ದಿಗೆ ಹೋಗುವಾಗ ನಾವೇ ಒಂದು ಸಣ್ಣ ಬಾಟಲಿ ಕೊಂಡು ಹೋಗಬೇಕಿತ್ತು.ಹೆಚ್ಚು ಕಮ್ಮಿ ಎಲ್ಲ ರೋಗಗಳಿಗೂ ಒಂದೇ ಕಲರಿನ ಮದ್ದು ಕೊಡುತ್ತಿದ್ದರು.ಜ್ವರಕ್ಕೂ ಅದೇ,ಬಂಜಿಬೇನೆಗೂ ಅದೇ..ಟೇಸ್ಟಲ್ಲಿ ಮಾತ್ರ ಸ್ವಲ್ಪ ಚೇಂಜಸ್ ಅಷ್ಟೆ.ಅಂದಿನ ರೋಗಗಳೂ ಹಾಗೆ….ಅವರು ಕುಪ್ಪಿಗೆ ಹಾಕಿ ಕೊಡುತ್ತಿದ್ದ ಮದ್ದಿನಲ್ಲೇ ಮಯಕ್ಕವಾಗುತ್ತಿತ್ತು.!
ಇನ್ನೂ ನೆನಪಿಸಬೇಕಾದರೆ ಅಂದಿನ ಸಣ್ಣ ಮಕ್ಕಳಿಗೆ ಕೈ ಕಾಲುಗಳಲ್ಲಿ ಗಜ್ಜಿ ಬೀಳುತ್ತಿತ್ತು.ಈಗ ಆ ಗಜ್ಜಿ ಇಲ್ಲ.ತುರಿಸುತ್ತಿದ್ದರಿಂದ ಗಜ್ಜಿಯ ಸೈಡ್ ಸೈಡಲ್ಲೇ ಬೆರಳ ಉಗುರಿನಲ್ಲಿ ಮೆಲ್ಲನೆ ಚಿವುಟುತ್ತಿದ್ದದ್ದು ನೆನಪಿದೆ.
ಡಾ.ಸುಧಾಕರ ಶೆಟ್ಟಿ ಅವರ ಕ್ಲಿನಿಕ್ ನಲ್ಲಿ ಎಲ್ಲ ರೋಗಗಳಿಗೂ ಮದ್ದಿತ್ತು,ಚಿಕಿತ್ಸೆ ಇತ್ತು. ಕೆಲವೊಂದು ಹಾಸಿಗೆ ವ್ಯವಸ್ಥೆ ಇದ್ದ ಅಂದಿನ ದಿನಗಳಲ್ಲಿ ಹೆರಿಗೆ,ಅಪಘಾತ, ಜ್ವರ,ಮುಂತಾದವುಗಳಿಗೆ ಅಡ್ಮಿಟ್ ಆಗುವ ವ್ಯವಸ್ಥೆ ಇದ್ದದ್ದು ಇಲ್ಲೇ.
ಅತೀ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದುದರಿಂದ ಬಡವರ ಡಾಕ್ಟ್ರು ಎಂದೇ ಡಾ.ಸುಧಾಕರ ಶೆಟ್ಟಿ ಅವರು ಫೇಮಸ್ ಆಗಿದ್ದರು.
‘ ಒಲ್ತ ಮರ್ದ್ ‘? ಎಂಬ ಪ್ರಶ್ನೆಗೆ ‘ಸುಧಾಕರ ಶೆಟ್ರಲ್ತ್’ ಎಂಬ ಉತ್ತರವೇ ಅಂದಿನ ದಿನಗಳಲ್ಲಿ ಕೇಳಿಬರುತ್ತಿದ್ದದ್ದು.
ಮೂಡುಬಿದಿರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಡಾ.ಸುಧಾಕರ ಶೆಟ್ಟಿ ಅವರು ಸೋಮವಾರ ನಿಧನರಾಗಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.
–ಅಶ್ರಫ್ ವಾಲ್ಪಾಡಿ