ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ ) ಮತ್ತು ಮಹಿಳಾ ಘಟಕ ಶಿರ್ತಾಡಿ ಇದರ ವಿಶೇಷ ಸಭೆಯು ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಸ್ತುತ ವರ್ಷದ ಗುರುಪೂಜೆಯ ಸಂದರ್ಭದಲ್ಲಿ ಸಂಘದ ವತಿಯಿಂದ ಜನಪರ ಕಾರ್ಯಕ್ರಮವೊಂದನ್ನು ಮಾಡಬೇಕೆಂದು ಸಭೆಯಲ್ಲಿ ಚಿಂತನ ಮಂಥನ ನಡೆಸಿ, ಇಂದಿನ ಕಾಲಘಟ್ಟದಲ್ಲಿ ವಿಷಕಾರಿ ಆಹಾರ ಸೇವನೆ ಮತ್ತು ಅವೈಜ್ಞಾನಿಕ ಜೀವನಶೈಲಿಯಿಂದ ಮದ್ದಿಲ್ಲದ ಮನೆ ಇಲ್ಲ ಎಂಬಂತಾಗಿದೆ. ಆದ್ದರಿಂದ “ವೈದ್ಯೋ ನಾರಾಯಣೋ ಹರಿ” ಎಂಬಂತೆ ಎಲ್ಲಾ ಕಾಯಿಲೆಗಳೂ ಪರಿಹಾರವಾಗಬಲ್ಲಂತಹ “ಧನ್ವಂತರಿ ಮಹಾಯಾಗ”ವನ್ನು ಇದೇ ಬರುವ ದಿನಾಂಕ 29/11/ 2026 ರವಿವಾರ ಮಾಡುವುದೆಂದು ತೀರ್ಮಾನಿಸಿ, ಸಮಸ್ತ ಜನರ ಅನಾರೋಗ್ಯ ನಿವಾರಿಸುವ “ಧನ್ವಂತರಿ ಮಹಾಯಾಗ”ದ ಸಂಚಾಲಕರನ್ನಾಗಿ ವಿಶ್ವನಾಥ್ ಹನ್ನೇರ್ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ಘಟಕ , ಉಪ ಸಮಿತಿ, ಗ್ರಾಮ ಸಮಿತಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಲಹೆಗಾರರು ಉಪಸ್ಥಿತರಿದ್ದರು.








































