ನಾರಾವಿ: ಜಿಲ್ಲೆಗೆ ಸತೀಶ, ತಾಲೂಕಿಗೆ ಸುರೇಶ?

Picture of Namma Bedra

Namma Bedra

Bureau Report

ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದೆ. ಈಗಾಗಲೇ ಕರಡು ಮೀಸಲಾತಿ ಪ್ರಕಟಗೊಂಡಿದ್ದು ಒಂದುವೇಳೆ ಅದೇ ಮೀಸಲಾತಿಯೇ ಫೈನಲ್ ಆದರೆ ಆಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ಮೂಡಲಿದೆ.
ಬೆಳ್ತಂಗಡಿ ತಾಲೂಕಿನ ಜಿಲ್ಲಾ ಪಂಚಾಯತ್ ಗಳ ಪೈಕಿ ನಾರಾವಿ ಜಿಲ್ಲಾ ಪಂಚಾಯತ್ ಕ್ಷೇತ್ರ ರಾಜಕೀಯವಾಗಿ ಬಹಳಷ್ಟು ಕುತೂಹಲ ಕೆರಳಿಸುವ ಕ್ಷೇತ್ರ. ಈ ಹಿಂದೆಯೂ ಈ ಕ್ಷೇತ್ರ ರಾಜಕೀಯವಾಗಿ ಬಾರೀ ಸುದ್ಧಿ ಮಾಡಿತ್ತು. ಧರಣೇಂದ್ರ ಕುಮಾರ್ ಅವರು ಈ ಕ್ಷೇತ್ರದ ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು.
ಈಬಾರಿ ನಾರಾವಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಎರಡೂ ಕ್ಷೇತ್ರಗಳಿಗೂ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ.
ಈ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳೆಂದರೆ ಸತೀಶ್ ಕಾಶಿಪಟ್ಣ ಹಾಗೂ ಸುರೇಶ್ ಅಂಚನ್ ಅವರದ್ದು.
ಜಿಲ್ಲಾ ಪಂಚಾಯತ್ ಗೆ ಸತೀಶ್ ಹಾಗೂ ತಾಲೂಕು ಪಂಚಾಯತ್ ಗೆ ಸುರೇಶ್ ಅಂಚನ್ ಅವರ ಹೆಸರು ಕ್ಷೇತ್ರದಾದ್ಯಂತ ಚಾಲ್ತಿಯಲ್ಲಿದೆ.
ಸತೀಶ್ ಕಾಶಿಪಟ್ಣ ಅವರು ಈಗಾಗಲೇ ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದವರು.ಅವರ ಹೆಸರು ಬೆಳ್ತಂಗಡಿ ತಾಲೂಕಿನಾದ್ಯಂತ ಚಿರಪರಿಚಿತವಾದದ್ದು.
ಕಾಶಿಪಟ್ಣ ಪಂಚಾಯತ್ ಗೆ ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿರುವ ಅವರು ಪಂಚಾಯತ್ ಅಧ್ಯಕ್ಷರಾಗಿ ಗಮನಾರ್ಹ ಸಾಧನೆ ಮಾಡಿದವರು.ಪೆರಾಡಿ ಸೊಸೈಟಿಯ ಅಧ್ಯಕ್ಷರಾಗಿಯೂ ಸಹಕಾರಿ ಕ್ಷೇತ್ರದಲ್ಲಿ ಹೆಸರುಗಳಿಸಿದವರು.ಅವಕಾಶ ಸಿಕ್ಕರೆ ಗೆಲುವು ಸುಲಭವಾಗಬಹುದೆನ್ನುವ ಲೆಕ್ಕಾಚಾರ ಕಾಂಗ್ರೆಸಿಗರದ್ದು.
ಸುರೇಶ್ ಅಂಚನ್ ಜಯಶ್ರೀ ಹೊಟೆಲ್ ಮಾಲಕರಾಗಿ, ಪಿಜತ್ತಕಟ್ಟೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಸಮಾಜಸೇವಕರಾಗಿ ಸಮಾಜದಲ್ಲಿ ಗುರುತಿಸಿಕೊಂಡ ದೊಡ್ಡ ಹೆಸರು. ಸರ್ವರನ್ನೂ ಸಮಾನವಾಗಿ ಕಾಣುತ್ತಾ, ಬಡವರಿಗೆ,ಅಶಕ್ತರಿಗೆ ,ರೋಗಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಾ ಬಂದವರು.
ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಕಂಡುಬರುತ್ತಿರುವ ಸುರೇಶ್ ಅಂಚನ್ ಅವರದ್ದು ನಾರಾವಿ ಹಾಗೂ ಮೂಡುಬಿದಿರೆ ಪರಿಸರದಲ್ಲಿ ಚಿರಪರಿಚಿತ ಹೆಸರು.
ಸದಾ ಲವಲವಿಕೆಯ ಈ ಸಮಾಜಸೇವಕನ ಹೆಸರು ನಾರಾವಿ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿದೆ.ಅವಕಾಶ ಸಿಕ್ಕರೆ ಈ ಉತ್ಸಾಹಿ ತರುಣ ಕೂಡಾ ತಾ.ಪಂ.ಸದಸ್ಯರಾಗಿ ಆಯ್ಕೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top