ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ ಹನ್ನೆರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಮೂಡುಬಿದಿರೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
12 ವರ್ಷಗಳ ಹಿಂದೆ ಕೊಡಂಗಲ್ಲಿನ ಅನಿಲ್ ಲೋಬೋ ಎಂಬವರು ಕಳ್ಳತನವೊಂದಕ್ಕೆ ಸಂಬಂಧಿಸಿ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು.
ಮೂಡುಬಿದಿರೆ ಠಾಣೆಯಲ್ಲಿ ಜಯಂತ, ಸುರೇಶ ಹಾಗೂ ಅಶೋಕ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪೈಕಿ ಜಯಂತ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ನ್ಯಾಯಾಲಯವು ಎಲ್ ಪಿ ಸಿ ಪ್ರಕರಣವೆಂದು ಘೋಷಣೆ ಮಾಡಿದ್ದು ಮೂಡುಬಿದಿರೆ ಪೊಲೀಸರು ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದಾಗ ಆರೋಪಿ ಉಪ್ಪಿನಂಗಡಿಯ ಬಾರೊಂದರಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮೂಡುಬಿದಿರೆ ಪಿಎಸ್ಸೈ ಪ್ರತಿಭಾ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್,ಮುಹಮ್ಮದ್ ಇಕ್ಬಾಲ್, ನಾಗರಾಜ್, ರೋಹಿತ್ ಹಾಗೂ ವೆಂಕಟೇಶ್ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.












