ಹಂಡೇಲು ಮಸೀದಿಯ ಭೂಮಿ ವಿವಾದಕ್ಕೆ ಹೈಕೋರ್ಟ್‌ನಲ್ಲಿ ಪರಿಹಾರ: ಮೂರು ತಿಂಗಳೊಳಗೆ ಪರ್ಯಾಯ ಜಮೀನು ಮಂಜೂರಿಗೆ ನಿರ್ದೇಶನ. ಅರ್ಜಿದಾರರ ಪರ ವಕೀಲ ದೀವೀನ್ ವರ್ಮಾ ಬಿ. ಅವರ ವಾದಕ್ಕೆ ಮಹತ್ವ

Picture of Namma Bedra

Namma Bedra

Bureau Report

ಬೆಂಗಳೂರು, ಆಗಸ್ಟ್ 25: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಪುತ್ತಿಗೆ ಗ್ರಾಮದ ಮಸೀದಿಯ ಖಬರಸ್ತಾನಕ್ಕೆ ಸಂಬಂಧಿಸಿದ ಭೂಸ್ವಾಧೀನ ಮತ್ತು ಪರಿಹಾರದ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಬಳಸಿಕೊಂಡ ಭೂಮಿಗೆ ಪರ್ಯಾಯ ಜಮೀನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವ ನ್ಯಾಯಾಲಯ, ಈ ಪ್ರಕ್ರಿಯೆಯನ್ನು ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಮೂಡಬಿದಿರೆ ತಾಲ್ಲೂಕಿನ ಪುತ್ತಿಗೆ ಗ್ರಾಮದ ಹಂಡೇಲ್‌ನ ಮೊಹಿಯುದ್ದೀನ್ ಜುಮಾ ಮಸೀದಿ – ಅಲ್ ಮದ್ರಸತುಲ್ ಖಾದ್ರಿಯ್ಯಾ ಸಂಸ್ಥೆಯು ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಸಂಸ್ಥೆಯ ಅಧ್ಯಕ್ಷ ಎಚ್.ಎ. ಖಾದರ್ ಅವರ ಪ್ರತಿನಿಧಿತ್ವದಲ್ಲಿ ಸಲ್ಲಿಸಲಾದ ಈ ಅರ್ಜಿಯಲ್ಲಿ, ಸರ್ವೆ ನಂ. 628/2ರಲ್ಲಿರುವ 4.14 ಎಕರೆ ಜಮೀನನ್ನು ಮುಸ್ಲಿಂ ಸಮುದಾಯದ ಖಬರಸ್ತಾನಕ್ಕಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈ ಜಮೀನಿನ ಭಾಗವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ, ಪರಿಹಾರ ನೀಡುವ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಜಮೀನು ಸರ್ಕಾರಕ್ಕೆ ಸೇರಿದ್ದು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಉಚಿತವಾಗಿ ಹಸ್ತಾಂತರಿಸಲಾಗಿದೆ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು.
ಅರ್ಜಿದಾರರ ಪರ ದೀವೀನ್ ವರ್ಮಾ ಬಿ. ವಾದ
ಅರ್ಜಿದಾರರ ಪರವಾಗಿ ವಕೀಲ ದೀವೀನ್ ವರ್ಮಾ ಬಿ. ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಸ್ವಾಧೀನಪಡಿಸಿಕೊಂಡ ಜಮೀನನ್ನು ಖಬರಸ್ತಾನವಾಗಿ ಬಳಸಲಾಗುತ್ತಿದ್ದು, ರಸ್ತೆ ವಿಸ್ತರಣೆಗಾಗಿ ಬಳಸಿಕೊಂಡ ಭೂಮಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಬೇಕು ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿತ್ತು. ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದ ಪ್ರಮಾಣಕ್ಕಿಂತ ಹೆಚ್ಚಿನ ಜಮೀನು ಬಳಸಿಕೊಂಡಿರುವ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರ್ಯಾಯ ಜಮೀನು ಒದಗಿಸುವ ಪ್ರಸ್ತಾವನೆಯನ್ನು ನ್ಯಾಯಾಲಯದ ಮುಂದೆ ಮಂಡಿಸಿತು. ಪ್ರಸ್ತುತ ಸ್ಥಳದಲ್ಲಿ 71.75 ಸೆಂಟ್ಸ್ ಜಮೀನನ್ನು ಉಳಿಸಿಕೊಂಡು, ಉಳಿದ ಅಗತ್ಯಕ್ಕೆ ಪರ್ಯಾಯ ಜಮೀನು ಒದಗಿಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಅಲ್ಲದೆ, ಮಸೀದಿಯಿಂದ ಪರ್ಯಾಯ ಜಮೀನಿಗೆ ಸಂಪರ್ಕ ಮಾರ್ಗ ಕಲ್ಪಿಸುವಂತೆ ಮುಂದೆ ಮನವಿ ಸಲ್ಲಿಸಿದರೆ, ಅದನ್ನು ಕಾನೂನಿನ ಪ್ರಕಾರ ಪರಿಗಣಿಸಬೇಕು ಎಂಬ ಅಂಶವನ್ನೂ ಪ್ರಸ್ತಾಪಿಸಿದರು.
ಮೂರು ತಿಂಗಳೊಳಗೆ ಪರ್ಯಾಯ ಜಮೀನು ಮಂಜೂರಿಗೆ ಆದೇಶ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರು, ಅರ್ಜಿದಾರರು ಪರ್ಯಾಯ ಜಮೀನು ಸ್ವೀಕರಿಸಲು ತಾತ್ವಿಕವಾಗಿ ಒಪ್ಪಿರುವುದನ್ನು ಪರಿಗಣಿಸಿ ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದರು. ಗುರುತಿಸಲಾದ ಪರ್ಯಾಯ ಜಮೀನನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ನ್ಯಾಯಾಲಯದ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಮೂರು ತಿಂಗಳೊಳಗೆ ಪರ್ಯಾಯ ಜಮೀನು ಮಂಜೂರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪರ್ಯಾಯ ಜಮೀನಿಗೆ ಮಸೀದಿಯಿಂದ ಸಂಪರ್ಕ ಮಾರ್ಗ ಕಲ್ಪಿಸುವಂತೆ ಅರ್ಜಿದಾರರು ಮನವಿ ಸಲ್ಲಿಸಿದಲ್ಲಿ, ಅದನ್ನು ಕಾನೂನಿನ ಪ್ರಕಾರ ಪರಿಗಣಿಸಬೇಕು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ದೀವೀನ್ ವರ್ಮಾ ಬಿ. ಅವರು, ಭೂಸ್ವಾಧೀನದಿಂದ ಉಂಟಾದ ಸಮಸ್ಯೆಗೆ ಪರ್ಯಾಯ ಜಮೀನು ಒದಗಿಸುವ ಮೂಲಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನ ಮಹತ್ವ ಪಡೆದಿದೆ.
ಪ್ರಕರಣದ ತೀರ್ಪು ಮಸೀದಿ ಆಡಳಿತ ಮಂಡಳಿಗೆ ಪರ್ಯಾಯ ಜಮೀನು ಪಡೆಯುವ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮಗಳು ಕೈಗೊಳ್ಳಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top