ಮೂಡುಬಿದಿರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್.ವತಿಯಿಂದ ಪ್ರತಿಭಟನೆ *ಜ್ಞಾನೇಶ್ ಕುಮಾರ್ ವಜಾ, ಎಸ್.ಐ.ಆರ್. ರದ್ದಾಗುವವರೆಗೆ ಪ್ರತಿಭಟನೆ ನಿಲ್ಲಲ್ಲ: ಇಕ್ಬಾಲ್ ಬಾಳಿಲ

Picture of Namma Bedra

Namma Bedra

Bureau Report

ಎಸ್.ಐ.ಆರ್.ನ್ನು ಜಾರಿಗೊಳಿಸಿ ದೇಶದಾದ್ಯಂತ ಅರಾಜಕತೆ ಸೃಷ್ಟಿಯಾಗಿದೆ,ಇದು ಸರಿಯಿಲ್ಲ ಎನ್ನುವುದನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿಯವರೇ ಹೇಳಿದ್ದಾರೆ,ಭಾರತದಲ್ಲಿರುವ ಭಾರತೀಯರನ್ನೇ ಮತದಾರರ ಪಟ್ಟಿಯಿಂದ ಹೊರಗಿಡುವಂತಹ ಕೆಲಸ ನಡೆಯುತ್ತಿದ್ದು ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ,ಈ ಅವೈಜ್ಞಾನಿಕ ಎಸ್.ಐ.ಆರ್.ಪ್ರಕ್ರಿಯೆಯನ್ನು ಕೈಬಿಡಬೇಕು, ಇದರಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಮಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಅಥವಾ ಅವರೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಎಸ್.ಕೆ.ಎಸ್.ಎಸ್.ಎಫ್.ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಅವರು ಒತ್ತಾಯಿಸಿದರು.
ಎಸ್.ಐ.ಆರ್.ಅಕ್ರಮ ವಿರುದ್ಧ ಹಾಗೂ ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಮೂಡುಬಿದಿರೆ ವಲಯ ಸಮಿತಿಯ ವತಿಯಿಂದ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.


ಜನರ ಬದುಕಿನಲ್ಲಿ ಚೆಲ್ಲಾಟವಾಡಲು ಹೊರಟ ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ವಿರುದ್ಧ ದೇಶದಾದ್ಯಂತ ಜನರು ತಿರುಗಿಬಿದ್ದಿದ್ದಾರೆ, ಬಿಹಾರ,ಪಶ್ಚಿಮಬಂಗಾಳದಲ್ಲಿ ಅದೆಷ್ಟೋ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ಅಕ್ರಮವೆಸಗಿದ್ದಾರೆ,ಪಶ್ಚಿಮ ಬಂಗಾಳದ ಇಪ್ಪತ್ತು ಲಕ್ಷ ಜನರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಜನರೀಗ ಎಚ್ಚೆತ್ತುಕೊಂಡಿದ್ದಾರೆ,ಎಸ್.ಐ.ಆರ್.ರದ್ದಾಗುವವರೆಗೆ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ಅವರು ಇದು ಕೇವಲ ಮುಸಲ್ಮಾನರ ಪ್ರತಿಭಟನೆಯಲ್ಲ, ಎಸ್.ಐ.ಆರ್.ನಿಂದ ಎಲ್ಲ ಜಾತಿ ಧರ್ಮದವರೂ ತೊಂದರೆಗೊಳಗಾಗಿದ್ದಾರೆ,ನಮ್ಮ ಪ್ರತಿಭಟನೆ ತೊಂದರೆಗೊಳಗಾದವರ ಪರವಾಗಿ ಇರಲಿದೆ ಎಂದರು.
ನ್ಯಾಯವಾದಿ ಇರ್ಷಾದ್ ಎನ್.ಜಿ.ಅವರು ಮಾತನಾಡಿ ‘ದೇಶದಲ್ಲಿ ಡಿಲೀಟ್ ಆದ ಮತದಾರರ ಸಂಖ್ಯೆ ಮತ್ತು ಎಸ್.ಐ.ಆರ್‌ನಿಂದಾದ ಸನಸ್ಯೆಗಳ ಬಗ್ಗೆ ವಿವರಿಸಿದರು.
ಎಸ್.ಕೆ.ಎಸ್.ಎಸ್.ಎಫ್.ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ,ಎಸ್.ಕೆ.ಎಸ್.ಎಸ್.ಎಫ್. ಮೂಡುಬಿದಿರೆ ವಲಯಾಧ್ಯಕ್ಷ ಎಂ.ಎ.ಎಸ್.ಆಸಿಫ್ ತೋಡಾರ್, ಉಪಾಧ್ಯಕ್ಷ ಶಬೀರ್ ಹಂಡೇಲ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ದಾರಿಮಿ, ಟೌನ್ ಜುಮ್ಮಾ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುರ್ರಹ್ಮಾನ್, ಹಂಡೇಲು ಮಸೀದಿ ಕಮಿಟಿ ಅಧ್ಯಕ್ಷರಾದ ಎಚ್.ಎಮ್.ಅಬ್ದುಲ್ ಖಾದರ್ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಹಫೀಝ್ ಅನ್ಸಾರಿ ಸ್ವಾಗತಿಸಿದರು. ಕಲಂದರ್ ಅವರು ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top