ಶಿರ್ತಾಡಿಯ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕದ ಆಶ್ರಯದಲ್ಲಿ ನಾಳೆ (ನ.10) ನಡೆಯಲಿರುವ ವಿಶ್ವಶಾಂತಿ ಯಾಗಕ್ಕೆ ಸಕಲ ಸಿದ್ಧತೆ ನಡೆದಿದ್ದು ಸುಮಾರು ಮೂರರಿಂದ ಐದು ಸಾವಿರದಷ್ಟು ಜನರು ಈ ಯಾಗದಲ್ಲಿ ಭಾಗವಹಿಸುವ ನಿರಶಿಕ್ಷೆಯಿದೆ ಎಂದು ಸಂಘದ ಅಧ್ಯಕ್ಷ ಸೋಮನಾಥ ಶಾಂತಿ ಅವರು ತಿಳಿಸಿದ್ದಾರೆ.

ಕೇರಳ ಶಿವಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಮಠ ಸೋಲೂರು ಇಲ್ಲಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ನಾರಾಯಣಗುರು ವೈದಿಕ ಸಮಿತಿ, ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿರುವ ಈ ಯಾಗಕ್ಕೆ ಸಂಘ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ನಿರಂತರ ಶ್ರಮಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಹಾಗೂ ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರು ಮತ್ತು ಸಮಾಜದ 48 ಸಂಸ್ಥೆಗಳ ಸಹಕಾರದಲ್ಲಿ ಈ ಯಾಗ ನಡೆಯಲಿದೆ .
ವಿಶ್ವ ಶಾಂತಿ ಮಹಾಯಾಗ :
ಈ ಯಾಗವನ್ನು ಪ್ರಾರಂಭಿಸಿದವರು ಶ್ರೀ ನಾರಾಯಣ ಗುರುಗಳು. ಕೇರಳದ ಶಿವಗಿರಿ ಮಠದಲ್ಲಿ ಇಂದಿಗೂ ಈ ಯಾಗ ನಿತ್ಯ, ನಿರಂತರವಾಗಿ ನಡೆಯುತ್ತಿದೆ.
2017 ರಲ್ಲಿ ನಾನು ವೈದಿಕ ಸಮಿತಿ, ಮಂಗಳೂರು ಇದರ ಅಧ್ಯಕ್ಷನಾಗಿದ್ದಾಗ ಕೇರಳ ಶಿವಗಿರಿ ಮಠದಿಂದ ಕರ್ನಾಟಕದ ಶಾಂತಿಗಳಿಗೆ ವಿಖ್ಯಾತಾನಂದ ಸ್ವಾಮೀಜಿಯವರ ಮಖಾಂತರ ಕರೆ ಬರುತ್ತದೆ.ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಧಿಯಾಗಿ 90 ವರ್ಷಗಳಾಗಿದೆ,ಆ ಪ್ರಯುಕ್ತ 90 ದಿನಗಳ ವಿಶ್ವಶಾಂತಿ ಯಾಗ ನಡೆಯುತ್ತಿದ್ದು,ಈ ಯಾಗದಲ್ಲಿ ಭಾಗವಹಿಸಬೇಕೆಂದು ಆಗಿನ ಪೀಠಾಧಿಪತಿಗಳು,ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಶ್ರೀ ಶ್ರೀ ವಿಶುದ್ಧಾನಂದ ಸ್ವಾಮೋಜಿಯವರ ಆದೇಶದಂತೆ ನಾವು ಸುಮಾರು 50 ಮಂದಿ ಶಾಂತಿಯವರು ಆ ಯಾಗದಲ್ಲಿ ಭಾಗವಹಿಸಿದ್ದೆವು.
ಆ ಯಾಗವನ್ನು ನೋಡಿ ನಮಗೂ ಕರ್ನಾಟಕದಲ್ಲಿ ಇಂತಹ ಯಾಗವನ್ನು ನಡೆಸಬೇಕೆನಿಸಿ ಸ್ವಾಮೀಜಿಯವರಲ್ಲಿ ಕೇಳಿಕೊಂಡಾಗ ಅವರು ಸಂತೋಷದಿಂದ ಒಪ್ಪಿ ನಮಗೆ ದೀಕ್ಷೆ ನೀಡಿದರು.
ಅದರಂತೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪ್ರಥಮವಾಗಿ ಯಾಗವನ್ನು ನೆರವೇರಿಸಲಾಯಿತು. ಎರಡನೇ ಯಾಗವನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಪೇಕ್ಷೆಯಂತೆ ಮೂಲ್ಕಯ ಮಹಾಮಂಡಲದ ಕಚೇರಿಯಲ್ಲಿ ನಡೆಸಲಾಯಿತು.
ಮೂರನೇ ಯಾಗ ಶಿರ್ತಾಡಿಯಲ್ಲಿ ನಡೆಯುತ್ತಿದ್ದು ಸಮಾಜದ ಸಂಘಟನೆಗಳಿಗೆ,ಯುವ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ,ಯಾವುದೇ ಜಾತಿ ಬೇಧವಿಲ್ಲದೆ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಮನಾಥ ಶಾಂತಿ ಅವರು ತಿಳಿಸಿದ್ದಾರೆ.
ಉದಯಕಾಲದಿಂದ ದೇವತಾ ಪ್ರಾರ್ಥನೆ, ಬ್ರಹ್ಮಕೂರ್ಚ ಹೋಮ,ಸ್ವಸ್ತಿ ಪುಣ್ಯಾಹ ವಾಚನ,ಮಹಾಗಣಪತಿ ಹವನ,ಗುರುಪೂಜೆ,ವಿಶ್ವಶಾಂತಿ ಯಾಗ ಆರಂಭ,ಪೂರ್ವಾಹ್ನ 11 ಕ್ಕೆ ಯಾಗದ ಪೂರ್ಣಾಹುತಿ,ಮಹಾಪೂಜೆ,ಪೀಠಾಧಿಪತಿಗಳಿಂದ ಆಶೀರ್ವಚನ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಲಿದೆಯೆಂದವರು ತಿಳಿಸಿದ್ದಾರೆ.