ಮುಂಬರುವ ಜಿಲ್ಲೆ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಅಂತಿಮ ಮೀಸಲಾತಿ ಪ್ರಕಡಗೊಂಡಿದ್ದು ಆಕಾಂಕ್ಷಿಗಳು ಮತ್ತೆ ರೆಡಿಯಾಗಿದ್ದಾರೆ.
ಈ ಹಿಂದೆ ಪ್ರಕಟಗೊಂಡಿದ್ದ ಮೀಸಲಾತಿಯಲ್ಲಿ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿ ಮಾತ್ರ ಬದಲಾವಣೆಯಾಗಿದ್ದು ಉಳಿದಂತೆ ಎಲ್ಲ ಕ್ಷೇತ್ರಗಳ ಮೀಸಲಾತಿ ಅದೇ ರೀತಿ ಮುಂದುವರಿದು ಅಂತಿಮವಾಗಿ ಪ್ರಕಟಗೊಂಡಿದೆ.
ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸಾಮಾನ್ಯ, ಬೆಳುವಾಯಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಗೊಂಡಿದೆ.
ಮೂಡುಬಿದಿರೆ ತಾಲೂಕಿನ 9 ತಾ.ಪಂ.ಕ್ಷೇತ್ರಗಳ ಪೈಕಿ ಬೆಳುವಾಯಿಗೆ ಅನುಸೂಚಿತ ಪಂಗಡ ಮಹಿಳೆ, ನೆಲ್ಲಿಕಾರಿಗೆ ಹಿಂದುಳಿದ ವರ್ಗ ಎ, ಪುತ್ತಿಗೆಗೆ ಸಾಮಾನ್ಯ ಮಹಿಳೆ, ತೆಂಕಮಿಜಾರಿಗೆ ಸಾಮಾನ್ಯ ಮಹಿಳೆ,ತೋಡಾರಿಗೆ ಹಿಂದುಳಿದ ವರ್ಗ ಎ.ಮಹಿಳೆ, ವಾಲ್ಪಾಡಿಗೆ ಅನುಸೂಚಿತ ಜಾತಿ ಮಹಿಳೆ,ಕಡಂದಲೆ, ಪಡುಮಾರ್ನಾಡು ಹಾಗೂ ಕಲ್ಲಮುಂಡ್ಕೂರುಗೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ.
ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಶಾಂತಿಪ್ರಸಾದ್ ಹೆಗ್ಡೆ, ಚಂದ್ರಹಾಸ ಸನಿಲ್, ಸುಚರಿತ ಶೆಟ್ಟಿ ಸಹಿತ ಹಲವರ ಹೆಸರು ಕೇಳಿಬರುತ್ತಿದೆಯಾದರೂ ಕೊನೇ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಬಹುದು.
ಬೆಳುವಾಯಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಗೊಂಡಿರುವುದರಿಂದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅಂಬಿಕಾ ಡಿ.ಶೆಟ್ಟಿ, ಶುಭಾ , ಲತಾ ಹೆಗ್ಡೆ,ವೈಶಾಲಿ ಪಡಿವಾಳ್ ಅವರ ಹೆಸರು ಕೇಳಿ ಬರುತ್ತಿದೆ.
ನೆಲ್ಲಿಕಾರು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಹಿಂದುಳಿದ ವರ್ಗ ಎ. ಮೀಸಲಾತಿ ಪ್ರಕಟಗೊಂಡಿದ್ದು ಬಿಜೆಪಿಯಿಂದ ಯುವ ನಾಯಕ, ಲೋಕಲ್ ಹೀರೋ ಅಶ್ವಥ್ ಪಣಪಿಲ ಅವರ ಹೆಸರು ಮುಂಚೂಣಿಯಲ್ಲಿದ್ದರೆ ಕಾಂಗ್ರೆಸ್ ನಿಂದ ನೆಲ್ಲಿಕಾರು ಗ್ರಾ.ಪಂ.ಮಾಜಿ ಅಧ್ಯಕ್ಷ ಉಪಾಧ್ಯಕ್ಷರಾದ ಹರೀಶ್ ಆಚಾರ್ಯ ಹಾಗೂ ಶಶಿಧರ ಎಂ.ಅವರ ಹೆಸರು ಕೇಳಿ ಬರುತ್ತಿದೆ.
ಪಡುಮಾರ್ನಾಡು ಕ್ಷೇತ್ರ ಸಾಮಾನ್ಯ ಮೀಸಲಾತಿ ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ ನಿಂದ ಜನಪ್ರಿಯ ಯುವ ಮುಖಂಡ, ಗ್ರಾ.ಪಂ.ನಲ್ಲಿ ಸೋಲಿಲ್ಲದ ಸರದಾರನಾಗಿರುವ ರಮೇಶ್ ಎಸ್.ಶೆಟ್ಟಿ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದರೆ ಮಾಜಿ ಸದಸ್ಯ ಪ್ರಶಾಂತ್ ಅಮೀನ್ ಅವರ ಹೆಸರೂ ಚಾಲ್ತಿಯಲ್ಲಿದೆ.
ಕಲ್ಲಮುಂಡ್ಕೂರು ಕ್ಷೇತ್ರದಿಂದ ಬಿಜೆಪಿಯಿಂದ ಯುವ ನಾಯಕ ಗ್ಲೆನ್ ವಿಶಾಲ್ ಡಿಸೋಜ ಅವರ ಹೆಸರು ಈಗಾಗಲೇ ಕ್ಷೇತ್ರದಾದ್ಯಂತ ಸುದ್ದಿ ಮಾಡಿದೆ.
ಜೋಕಿಮ್ ಕೊರೆಯಾ ಅವರು ಕಾಂಗ್ರೆಸ್ ನಿಂದ ಆಕಾಂಕ್ಷಿಯಾಗಿದ್ದಾರೆ.
ಸಾಮಾನ್ಯ ಮೀಸಲಾತಿ ಪ್ರಕಟಗೊಂಡ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಸಹಜವಾಗಿಯೇ ಹೆಚ್ಚುತ್ತಿದೆ.



