ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಗುರು ಜಯಂತಿಯ ಪ್ರಯುಕ್ತ ಗುರುಪೂಜೆ ಮತ್ತು ಧನ್ವಂತರಿ ಮಹಾಯಾಗವು ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸೋಮನಾಥ ಶಾಂತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಹಾಗೂ ಧನ್ವಂತರಿ ಮಹಾಯಾಗ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಈ ಮಹಾಯಾಗವನ್ನು ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುವ ಸಾವಿರದ ಎಂಟು ಬಗೆಯ ಔಷಧೀಯ ಗುಣಗಳನ್ನೊಳಗೊಂಡ ವಿವಿಧ ಸಸ್ಯ ಹಾಗೂ ಇತರ ವಸ್ತುಗಳನ್ನು ಹಾಕಿ ನಡೆಸಲಾಗುವುದೆಂದು ಅವರು ತಿಳಿಸಿದರು.
ಎಲ್ಲಾ ಬಗೆಯ ಔಷಧೀಯ ಸೊತ್ತುಗಳನ್ನು ಯಾಗಕ್ಕೆ ಆಹುತಿ ಮಾಡಿದ ಬಳಿಕ ಭಕ್ತಾದಿಗಳಿಗೆ ವಿತರಿಸಲಾಗುವುದು, ಈ ಯಾಗದಲ್ಲಿ ಯಾರು ಕೂಡಾ ಭಾಗವಹಿಸಬಹುದೆಂದು ಹೇಳಿದ ಅವರು ಸುಮಾರು ಎರಡೂವರೆ ಸಾವಿರ ಜನರು ಈ ಯಾಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಮಹಾಯಾಗ ಸಮಿತಿಯ ಸಂಚಾಲಕರಾದ ವಿಶ್ವನಾಥ ಹನ್ನೇರ್ ಅವರು ಮಾತನಾಡಿ ‘ 2023 ರಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವ ಶಾಂತಿಯೋಗ ನಡೆಸಲಾಗಿದ್ದು ಈಬಾರಿ ಧನ್ವಂತರಿ ಮಹಾಯಾಗ ನಡೆಯಲಿದೆ, ಸಂಘವು ಶೈಕ್ಷಣಿಕ, ಆರೋಗ್ಯ ಹಾಗೂ ಸಮಾಜದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಹೇಳಿದರು.
29 ರ ಬೆಳಿಗ್ಗೆ 7-30 ಕ್ಕೆ ಗುರುಪೂಜೆ, ಬಳಿಕ ಮಹಾಯಾಗ, ಮಧ್ಯಾಹ್ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥರಾದ ಅರುಣ್ ಉಳ್ಳಾಲ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ,ಬಳಿಕ ಸಂಘದ ಶಾಶ್ವತ ಸದಸ್ಯರಿಗೆ ಸನ್ಮಾನ, ಬಹುಮಾನ ವಿತರಣೆ,ಸಂಘದ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿಶ್ವನಾಥ ಹನ್ನೇರ್ ಮಾಹಿತಿ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ರುಕ್ಕಯ್ಯ ಪೂಜಾರಿ, ಕೋಶಾಧಿಕಾರಿ ಸುರೇಂದ್ರ ಕೆ. ಕಂದಿರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



