Latest News

ಬೆದ್ರ ತುಂಬಾ ಮಟ್ಕಾ ದಂಧೆ: ಪುರಸಭಾಧಿವೇಶನದಲ್ಲಿ ಆರೋಪ

Picture of Namma Bedra

Namma Bedra

Bureau Report

ಮೂಡುಬಿದಿರೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಟ್ಕಾ ದಂಧೆ ಹೆಚ್ಚುತ್ತಲೇ ಇದೆ,ಯುವ ಜನತೆ ಇಡೀ ದಿನ ಈ ದಂಧೆಯಲ್ಲೇ ತೊಡಗುತ್ತಿದ್ದು ಮಟ್ಕಾ ಸ್ಟಾಲ್ ಗಳು ಕೂಡಾ ಹೆಚ್ಚುತ್ತಿದೆ,ಕೆಲ ಯುವಕರು ಈ ಮಟ್ಕಾದಿಂದಾಗಿ ಜೀವಬಿಟ್ಟಿದ್ದಾರೆ,ಈ ದಂಧೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಪುರಸಭಾಧಿವೇಶನದಲ್ಲಿ ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಅವರು ಆಗ್ರಹಿಸಿದರು.
ಪುರಸಭಾಧಿವೇಶನದಲ್ಲಿ ಭಾಗವಹಿಸಿದ್ದ ಎಸ್.ಐ.ಸಿದ್ದಪ್ಪ ಅವರಲ್ಲಿ ಈ ಬಗ್ಗೆ ಅವರು ದೂರು ಸಲ್ಲಿಸಿದರು. ಇದಕ್ಕುತ್ತರಿಸಿದ ಸಿದ್ಧಪ್ಪ ಅವರು ಇಂತಹ ದಂಧೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.


ವಿದ್ಯುತ್ ಕಂಬಗಳಿಗೆ,ಟಿ.ಸಿ.ಗೆ ಫ್ಲೆಕ್ಸ್ ಹಾಕಬಾರದೆಂದು ನಿಯಮವಿದ್ದರೂ ಹೆಚ್ಚಿನ ಕಡೆಗಳಲ್ಲಿ ಇದು ಕಂಡುಬರುತ್ತಿದೆ, ಡಿ.ಸಿ.ಯ ಅಡಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆಂದು ಮೆಸ್ಕಾಂ ಅಧಿಕಾರಿ ಸತೀಶ್ ಅವರಲ್ಲಿ ರಾಜೇಶ್ ನಾಯ್ಕ್ ದೂರು ನೀಡಿದರು.
ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಇನ್ನೂ ಸರಿಯಾಗಿಲ್ಲ, ಕೆಲವು ಬಾರಿ ಈ ಬಗ್ಗೆ ಮೀಟಿಂಗ್ ನಡೆಸಿದರೂ ಪ್ರಯೋಜನವಾಗಿಲ್ಲ,ಪುರಸಭಾ ವಾಣಿಜ್ಯ ಸಂಕೀರ್ಣದಲ್ಲಿರುವ ವ್ಯಾಪಾರಿಗಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ, ಪುರಸಭೆಗೆ ಲಾಭ ಮಾಡಿ ಕೊಡುವ ಅಂಗಡಿ ವ್ಯಾಪಾರಸ್ಥರಿಗೆ ಅನ್ಯಾಯವಾದರೆ ಹೇಗೆ? ಎಂದು ಸದಸ್ಯೆ ಶ್ವೇತಾ ಜೈನ್ ಅವರು ಸಭೆಯಲ್ಲಿ ಗಮನಕ್ಕೆ ತಂದರು.
ಬೇಕಾಬಿಟ್ಟಿ ವಾಹನಗಳನ್ನು ಪಾರ್ಕಿಂಗ್ ಮಾಡುವ ವಾಹನಗಳಿಗೆ ಲಾಕ್ ಮಾಡಲಾಗುತ್ತಿದೆ,ನೋ ಎಂಟ್ರಿಯಲ್ಲಿ ಬರುವ ವಾಹನಗಳಿಗೂ ಫೈನ್ ಹಾಕಲಾಗುತ್ತಿದೆ ಎಂದು ಎಸ್.ಐ.ಸಿದ್ಧಪ್ಪ ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಇಂದು ಎಂ.ಅವರು ‘ಬಸ್ ಸ್ಟಾಂಡ್ ಪಾರ್ಕಿಂಗ್ ಸಮಸ್ಯೆ ಬಗ್ಗೆ ಈ ಹಿಂದೆ ಮೀಟಿಂಗ್ ಆಗಿದೆ,ಅದು ಹೆಚ್ಚು ಫಲಕಾರಿಯಾಗಿಲ್ಲ,ಮತ್ತೊಮ್ಮೆ ಮೂಡುಬಿದಿರೆ ಇನ್ಸ್ಪೆಕ್ಟರ್, ಪುರಸಭೆ, ಬಸ್ಸು ಮಾಲಕರು ಮತ್ತು ಏಜೆಂಟರ ಸಭೆ ನಡೆಸಲಾಗುವುದು’ ಎಂದರು.
ಈ ಹಿಂದೆ ಭಾರೀ ಚರ್ಚೆಯಾಗಿದ್ದ ಫಾಸ್ಟ್ ಫುಡ್ ವ್ಯಾಪಾರಿಗಳ ಸ್ಥಳಾಂತರ ವಿಷಯ ಏನಾಯಿತು? ಎಂದು ಸದಸ್ಯ ಕೊರಗಪ್ಪ ಪ್ರಶ್ನಿಸಿದಾಗ ಈಗಾಗಲೇ ಕೆಲವು ಸ್ಟಾಲ್ ಗಳಿಗೆ ಸ್ಥಳ ಗುರುತಿಸಲಾಗಿದೆ,ಅವರಿಗೆ ಇಂತಿಷ್ಟು ಹಣ ಕಟ್ಟಬೇಕೆಂದು ನಿಗದಿಪಡಿಸಲಾಗುವುದೆಂದು ಪುರಸಭಾ ಮುಖ್ಯಾಧಿಕಾರಿಯವರು ಉತ್ತರಿಸಿದರು.
ಹದಿನಾಲ್ಕು ವರ್ಷದೊಳಗಿನ ಮಕ್ಕಳು ದ್ವಿಚಕ್ರವಾಹನ ಚಲಾಯಿಸುತ್ತಾರೆ,ಅವರಲ್ಲಿ ಯಾವದೇ ಲೈಸೆನ್ಸ್ ಇರುವುದಿಲ್ಲ, ಅತವೇಗದಿಂದ ಬೈಕ್ ಓಡಿಸುವ ಬಾಲಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸದಸ್ಯ ಇಕ್ಬಾಲ್ ಕರೀಮ್ ಆಗ್ರಹಿಸಿದರು.
ಪುರಸಭಾಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಸುರೇಶ್ ಪ್ರಭು, ಹಿಮಾಯತ್ ಶೇಖ್, ಜೊಸ್ಸಿ ಮಿನೇಜಸ್, ಸೌಮ್ಯ, ದಿವ್ಯ ಜಗದೀಶ್, ಸ್ವಾತಿ ಪ್ರಭು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ನಾಗರಾಜ್ ಪೂಜಾರಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು