ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಕನ್ನಡಭವನದ ಕಾರ್ಯಕ್ರಮಗಳಿಗೆ ಪಾರ್ಕಿಂಗ್ ಗೆ ಅವಕಾಶ ನೀಡಲಾಗುತ್ತಿದೆ, ಫೆಬ್ರವರಿ, ಮಾರ್ಚ್ ವರೆಗೆ ಪ್ರತೀ ಭಾನುವಾರ ಪಾರ್ಕಿಂಗ್ ಗೆ ನೀಡಲಾಗಿದೆ, ಅಲ್ಲದೆ ಮೈದಾನದ ಗೇಟ್ ಗೆ ಪಾರ್ಕಿಂಗ್ ಎಂದು ಬೋರ್ಡ್ ಹಾಕಲಾಗಿದೆ, ಇದರಿಂದ ಕ್ರಿಕೆಟ್ ಆಟಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಪ್ರಭು ಹಾಗೂ ಇಕ್ಬಾಲ್ ಕರೀಮ್ ಅವರು ಪುರಸಭಾಧಿವೇಶನದಲ್ಲಿ ಆರೋಪಿಸಿದರು.
ಸ್ವರಾಜ್ಯ ಮೈದಾನದಲ್ಲಿ ಪಾರ್ಕಿಂಗ್ ಗೆ ಅವಕಾಶ ನೀಡಬಾರದೆಂದು ನಾವು ಹಿಂದೊಮ್ಮೆ ಪುರಸಭಾಧಿವೇಶನದಲ್ಲಿ ನಿರ್ಣಯ ಮಾಡಿದ್ದೆವು,ಆ ನಿರ್ಣಯಕ್ಕೆ ಬೆಲೆಯೇ ಇಲ್ವಾ,ಮೂಡುಬಿದಿರೆಯಲ್ಲಿರುವುದು ಏಕೈಕ ಮೈದಾನವಿದು,ಇದರಲ್ಲಿ ಪಾರ್ಕಿಂಗ್ ಗೆ ಅವಕಾಶ ನೀಡಿದರೆ ಇದಕ್ಕಿಂತ ನಾಚಿಕಗೇಡಿನ ವಿಷಯ ಮತ್ತೊಂದಿಲ್ಲ ಎಂದು ಪುರಂದರ ದೇವಾಡಿಗ ಹೇಳಿದರು.
ಕನ್ನಡ ಭವನ ನಿರ್ಮಾಣ ಮಾಡುವಾಗ ಅದರಲ್ಲಿ ಪಾರ್ಕಿಂಗ್ ಅಂತ ಎಲ್ಲಿ ತೋರಿಸಿದ್ದಾರೆ? ಅಷ್ಟು ದೊಡ್ಡ ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್ ಜಾಗವನ್ನೂ ಗುರುತಿಸಬೇಕಿತ್ತು, ಸಮಾರಂಭಗಳಿಗೆ ದೊಡ್ಡ ಬಾಡಿಗೆ ತೆಗೆದುಕೊಳ್ಳುತ್ತಾರೆ,ಪುರಸಭೆಗೆ ಏನಾದರೂ ತೆರಿಗೆ ಕಟ್ಟುತ್ತಾರಾ ಎಂದು ಸುರೇಶ್ ಪ್ರಭು ಪ್ರಶ್ನಿಸಿದರು.
ಸ್ವರಾಜ್ಯ ಮೈದಾನದಲ್ಲಿ ಪಾರ್ಕಿಂಗ್ ಗೆ ಅವಕಾಶ ನೀಡಬಾರದೆಂದು ಈ ಮೂವರು ಸದಸ್ಯರೂ ಒತ್ತಾಯಿಸಿದ್ದು ಮುಂದಿನ ಮೀಟಿಂಗ್ ಗೆ ಕ್ರೀಡಾ ಇಲಾಖೆಯ ಅಧಿಕಾರಿಯನ್ನು ಸಭೆಗೆ ಕರೆದು ಇತ್ಯರ್ಥಪಡಿಸೋಣ ಎಂದು ಉಪಾಧ್ಯಕ್ಷ ನಾಗರಾಜ್ ಪೂಜಾರಿ ಮತ್ತು ಮುಖ್ಯಾಧಿಕಾರಿ ಇಂದು ಎಂ.ಹೇಳಿದರು.
