Latest News

ಯಶಸ್ವೀ ಉದ್ಯಮಿ, ಪ್ರಚಾರರಹಿತ ಸಮಾಜ ಸೇವಕ ಸುರೇಶ್ ಅಂಚನ್ *ಸರ್ವರ ಪ್ರೀತಿಯ ‘ಸುರೇಶ’ನಿಗೆ ನಾಳೆ ಸನ್ಮಾನ

Picture of Namma Bedra

Namma Bedra

Bureau Report

ಕಳೆದ 25 ವರ್ಷಗಳಿಂದ ಹೊಟೇಲ್ ಉದ್ಯಮಿಯಾಗಿ,ಅದರೊಟ್ಟಿಗೆ ಪ್ರಚಾರರಹಿತ ಸಮಾಜಸೇವಕನಾಗಿ ಗಮನಸೆಳೆಯುತ್ತಿರುವ ಹೆಸರು ಸುರೇಶ್ ಅಂಚನ್.ಯಾವತ್ತೂ ಸನ್ಮಾನದ ವೇದಿಕೆಗಳಿಂದ ದೂರವೇ ಉಳಿಯುತ್ತಿದ್ದ ಈ ಸುರೇಶನನ್ನು ಗೆಜ್ಜೆಗಿರಿ ಯಕ್ಷಗಾನ ಮೇಳದವರು ಹೇಗೂ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ನಾಳೆ ಮೂಡುಬಿದಿರೆಯಲ್ಲಿ ನಡೆಯಲಿರುವ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ನಮ್ಮ ನಡುವಿನ ಈ ಸಾಮಾಜಿಕ ಕಳಕಳಿಯ ಯುವಕನನ್ನು ಸನ್ಮಾನಿದಲಿದ್ದಾರೆ.
ಬೆಳ್ತಂಗಡಿ ತಾಲೂಕು ಮರೋಡಿ ಗ್ರಾಮದ ದಿ.ಕೃಷ್ಣಪ್ಪ-ಸುಂದರಿ ದಂಪತಿಯ ಪುತ್ರನಾಗಿರುವ ಸುರೇಶ್ ಅಂಚನ್ ಶಿರ್ತಾಡಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಮುಂಬೈಗೆ ಹೋಗುತ್ತಾರೆ. ಅಲ್ಲಿ ಹಗಲು ಹೊಟೆಲ್ ಉದ್ಯಮ ಮಾಡಿಕೊಳ್ಳುತ್ತಾ ರಾತ್ರಿ ವೇಳೆ ಗೋರೆಗಾಂವ್ ನ ಸರಸ್ವತಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದು ಈತನ ಶ್ರಮ,ಸಾಧನೆಗೆ ಸಾಕ್ಷಿ.
19 ವರ್ಷಗಳಲ್ಲಿ ಮುಂಬೈಯಲ್ಲಿದ್ದುಕೊಂಡು ಕಳೆದ 6 ವರ್ಷಗಳಿಂದ ಮೂಡುಬಿದಿರೆಯಲ್ಲಿ ಜಯಶ್ರೀ ಹೊಟೇಲನ್ನು ಮುನ್ನಡೆಸುತ್ತಾ ಯಶಸ್ವೀ ಉದ್ಯಮಿಯಾಗಿರುವ ಸುರೇಶ ಅಂಚನ್ ಹೆಸರು ಬೆಳ್ತಂಗಡಿ ಹಾಗೂ ಮೂಡುಬಿದಿರೆ ತಾಲೂಕಿನಲ್ಲಿ ಪ್ರಸ್ತುತ ಮುಂಚೂಣಿಯಲ್ಲಿದೆ.
ಸದಾ ಹಸನ್ಮುಖಿಯಾಗಿದ್ದುಕೊಂಡು ಕ್ರಿಯಾಶೀಲನಾಗಿರುವ ಸುರೇಶ್ ಅಂಚನ್ ಉದ್ಯಮದ ಒತ್ತಡದ ನಡುವೆಯೂ ಸಾಮಾಜಿಕ ಸೇವೆಗೆ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಒಂದು ಅಪರೂಪದ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು.
ಸರ್ವರೊಂದಿಗೂ ಬೆರೆತು, ಸರ್ವರೊಂದಿಗೂ ಆತ್ಮೀಯ ಒಡನಾಟ ಹೊಂದಿರುವ ಸುರೇಶನ ಸಾಮಾಜಿಕ ಸೇವೆಯ ಪಟ್ಟಿ ದೊಡ್ಡದಿದೆ.
ಕೊರೊನಾ ಸಂದರ್ಭದಲ್ಲಿ ಹಲವಾರು ಮಂದಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ,ಅಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದು ಮಾತ್ರವಲ್ಲದೆ ದೂರದ ಮುಂಬೈಯಲ್ಲಿದ್ದ ಊರಿನ ಜನರನ್ನು ತವರೂರಿಗೆ ಕರೆಸುವ ವ್ಯವಸ್ಥೆ ಕಲ್ಪಿಸಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದವರಿಗೆ ಕಿಟ್ ನೀಡುವ ಮೂಲಕ ಆಪತ್ಬಾಂಧವನಾಗಿ ಗಮನಸೆಳೆದವರು.
ಉದ್ಯಮದಲ್ಲಿ ಎಷ್ಟೇ ಒತ್ತಡದಲ್ಲಿದ್ದರೂ ಯಾರಿಗೆ ಏನಾದರೂ ಸಂಭವಿಸಿದರೆ ತಟ್ಟನೆ ಎದ್ದು ಹೋಗುವ ಮನುಷ್ಯನೀತ.ಇಂದಿಗೂ ಈತನ ಕಾರಿನಲ್ಲಿ ಒಂದು ಸ್ಟೆತೋಸ್ಕೋಪ್ ಮತ್ತು ಎಮರ್ಜೆನ್ಸಿ ಕಿಟ್ ಇದೆ ಎಂದರೆ ಈತನ ಸಾಮಾಜಿಕ ಕಳಕಳಿ ಏನೆಂಬುದು ಅರ್ಥವಾಗುತ್ತದೆ.

ದುಡಿಮೆಯ ಒಂದಿಷ್ಟು ಎಂಬಂತೆ ಸಮಾಜದ ಅಶಕ್ತರಿಗೆ,ಬಡ ರೋಗಿಗಳಿಗೆ,ಅಸಹಾಯಕರಿಗೆ,ಬಡ ವಿದ್ಯಾರ್ಥಿಗಳಿಗೆಂದೇ ಮೀಸಲಿಟ್ಟು ಇತರರಿಗೆ ಮಾದರಿಯಾಗಿರುವ ಸುರೇಶ್ ಅಂಚನ್ ಸಾಮಾಜಿಕ ಮಾತ್ರವಲ್ಲದೆ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡವರು.
ಅಳಿವಿನಂಚಿನಲ್ಲಿದ್ದ ತನ್ನೂರ ಮರೋಡಿ ಅನುದಾನಿತ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವವರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಹಳೆವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು 75 ಕ್ಕೇರಿಸಿ ಆ ವಿದ್ಯಾರ್ಥಿಗಳಿಗೆಲ್ಲಾ ಸಂಪೂರ್ಣ ಉಚಿತ ವ್ಯವಸ್ಥೆಗಳನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರೇ ಸುರೇಶ್ ಅಂಚನ್.
ಮರೋಡಿ ಉಮಾಮಹೇಶ್ವರಿ ದೇವಸ್ಥಾನ,ಪಲಾರಗೋಳಿ ದೇವಸ್ಥಾನ, ಕಾಶಿಪಟ್ಣ ಪಂಚಲಿಂಗೇಶ್ವರ ದೇವಸ್ಥಾನದ ಮುಂಬೈ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಶ್ರಮಿಸಿದ್ದಾರೆ.
ಸಂಘ,ಸಂಸ್ಥೆಗಳಿಗೆ,ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಕಲಾಪೋಷಕರಾಗಿಯೂ ಗಮನಸೆಳೆದಿದ್ದಾರೆ.
ಕೃಷಿ ಚಡುವಟಿಕೆಗಳಿಂದ ಇಂದಿನ ಯುವಜನತೆ ದೂರ ಉಳಿದಿದ್ದಾರೆಂಬ ಮಾತುಗಳಿಗೆ ವಿರುದ್ಧ ಎಂಬಂತೆ ಪಡೀಲುಬಿದ್ದಿದ್ದ ತಮ್ಮಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಪೆರಾಡಿ ಸೊಸೈಟಿ ಬ್ಯಾಂಕ್ ನಿಂದ ಉತ್ತಮ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ ಆ ಪ್ರಶಸ್ತಿಯನ್ನು ತನ್ನ ತಾಯಿ ಸ್ವೀಕರಿಸುವಂತೆ ಮಾಡಿ ಅಲ್ಲೂ ಆದರ್ಶಮೆರೆದ ಯುವಕ ನಮ್ಮ ಪ್ರೀತಿಯ ಸುರೇಶ.
ಇಷ್ಟೆಲ್ಲಾ ಸಾಧನೆ ಮೂಲಕ ಜಿಲ್ಲಾ ಪ್ರಶಸ್ತಿಗೆ ಅರ್ಹನಾಗಿರುವ ವ್ಯಕ್ತಿ ಇವರು.ವಿಪರ್ಯಾಸವೆಂದರೆ ಅಂತಹ ಪ್ರಶಸ್ತಿ ಕೊಡುವವರಿಗೆ ಇಂತಹ ವ್ಯಕ್ತಿ ಕಾಣಲೇ ಇಲ್ಲ.
ಇದೀಗ ನಾಳೆ ಸಂಜೆ ಮೂಡುಬಿದಿರೆಯಲ್ಲಿ ಗೆಜ್ಜೆಗಿರಿ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಒಂದು ಯಕ್ಷಗಾನ ಪ್ರದರ್ಶನವಿದೆ.ಆ ಸಮಾರಂಭದಲ್ಲಿ ನಮ್ಮ ಸುರೇಶನಿಗೆ ಗೌರವ ಸನ್ಮಾನವಿದೆ.ಅವರಿಗೆ ಅಭಿನಂದನೆ.
ಸುರೇಶನ ಸಾಮಾಜಿಕ ಸೇವೆ ಇನ್ನಷ್ಟು ಮುಂದುವರಿಯಲಿ ಎಂಬ ಆಶಯದೊಂದಿಗೆ ಅವರಿಗೆ, ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಬಳಗದವರಿಗೆ ಯಶಸ್ಸಿನ ಹಾರೈಕೆ ನಮ್ಮದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು