Latest News

ಮೂಡುಬಿದಿರೆ: ಮೆಸ್ಕಾಂ ಬಳಿಯ ಅನಧಿಕೃತ ಫಿಶ್ ಸ್ಟಾಲ್ ಶಿಫ್ಟ್ ಗೆ ಪುರಸಭಾ ವಿಪಕ್ಷೀಯ ಸದಸ್ಯರ ಆಗ್ರಹ. *ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯವೇಕೆ? ಎಲ್ಲರಿಗೂ ಸಮಾನ ನ್ಯಾಯಕೊಡಿ!

Picture of Namma Bedra

Namma Bedra

Bureau Report

ಮೂಡುಬಿದಿರೆ ಮೆಸ್ಕಾಂ ಕಚೇರಿ ಸುತ್ತಮುತ್ತ ಇದ್ದ ಕೆಲವು ಮೀನು ವ್ಯಾಪಾರಿಗಳನ್ನು ಯಾವುದೇ ನಿರ್ಣಯವಾಗದೆ ಏಕಾಏಕಿ ತೆರವುಗೊಳಿಸಿದ್ದೀರಿ,ಆದರೆ ಅಲ್ಲೇ ಇರುವ ಅನಧಿಕೃತ ಫಿಶ್ ಸ್ಟಾಲನ್ನು ತೆರವುಗೊಳಿಸಲ್ಲವೇಕೆ? ಅದನ್ನೂ ತೆರವುಗೊಳಿಸಿ ಮಾರ್ಕೆಟ್ ಗೆ ಶಿಫ್ಟ್ ಮಾಡಿ ಎಂದು ಮೂಡುಬಿದಿರೆ ಪುರಸಭಾ ವಿಪಕ್ಷೀಯ ಸದಸ್ಯರು ನಿನ್ನೆ ನಡೆದ ವಿಶೇಷ ಸಭೆಯಲ್ಲಿ ಆಗ್ರಹಿಸಿದರು.
ಪುರಸಭಾಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ,ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ‘ಮೀನು’ ಚರ್ಚೆ ಸುದೀರ್ಘವಾಗಿ ನಡೆಯಿತು.
ಇತ್ತೀಚೆಗೆ ಮೆಸ್ಕಾಂ ಬಳಿ ರಸ್ತೆ ಬದಿ ಸಣ್ಣ ಸಣ್ಣ ಮಟ್ಟಿನ ಮೀನು ವ್ಯಾಪಾರ ಮಾಡುತ್ತಿದ್ದ ಕಡೆ ಪುರಸಭಾ ಸಿಬ್ಬಂದಿಗಳು ದಾಳಿ ನಡೆಸಿ ಅನಧಿಕೃತ ಎಂದು ತೆರವುಗೊಳಿಸಿದ್ದರು.ಅಲ್ಲದೆ ಅವರನ್ನು ಮಾರ್ಕೆಟ್ ಗೆ ಶಿಫ್ಟ್ ಮಾಡುವಂತೆಯೂ ಸೂಚಿಸಿದ್ದರು. ಇದನ್ನು ಆ ಪರಿಸರದ ವಾರ್ಡ್ ಗಳ ಸದಸ್ಯರುಗಳು ಆಕ್ಷೇಪಿಸಿ ಅಲ್ಲೇ ಇರುವ ಫಿಶ್ ಸ್ಟಾಲನ್ನೂ ತೆರವುಗೊಳಿಸುವಂತೆ ಆಗ್ರಹಿಸಿದ್ದರು.
ನಿನ್ನೆ ಮತ್ತೆ ಆ ಬಗ್ಗೆ ಪ್ರಸ್ತಾಪಗೊಂಡು ಆಡಳಿತ, ವಿಪಕ್ಷೀಯ ಸದಸ್ಯರ ನಡುವೆ ಕೆಲಕಾಲ ಚರ್ಚೆ ನಡೆಯಿತು.


ವಿಪಕ್ಷೀಯರ ಆರೋಪಕ್ಕೆ ಉತ್ತರಿಸಿದ ಆಡಳಿತ ಸದಸ್ಯರು’ ಅದು ಮೀನುಗಾರಿಕಾ ನಿಗಮದಿಂದ ಅನುಮತಿ ಪಡೆದ ಸ್ಟಾಲ್,ಅದನ್ನು ತೆರವುಗೊಳಿಸಲು ಸಾಧ್ಯವಿಲ್ಲ’ ವೆಂದರು.
ಆಗ ಮಾತನಾಡಿದ ಸುರೇಶ್ ಪ್ರಭು ಅವರು ” ಮೀನುಗಾರಿಕಾ ನಿಗಮದಿಂದ ಮಂಜೂರಾಗಿರುವುದು ಆಳ್ವಾಸ್ ಹತ್ತಿರ,ಅಲ್ಲಿ ಸ್ಟಾಲನ್ನು ಶಾಸಕರೇ ಉದ್ಘಾಟಿಸಿದ್ದರು,ಆದರೆ ಕಳೆದ ಅವಧಿಯಲ್ಲಿನ ಅಧ್ಯಕ್ಷರು ಬಹುಮತದ ಆಧಾರದಲ್ಲಿ ಎಂದು ಮೆಸ್ಕಾಂ ಬಳಿಗೆ ಶಿಫ್ಟ್ ಗೆ ಅನುಮತಿ ನೀಡಿದ್ದರು, ಇದೂ ಕೂಡ ಅನಧಿಕೃತವಾದದ್ದೆ, ಸಣ್ಣ ವ್ಯಾಪಾರ ಅನಧಿಕೃತವಾದರೆ ಇದೂ ಕೂಡಾ ಅನಧಿಕೃತವಲ್ಲವೇ? ಈ ಸ್ಟಾಲನ್ನೂ ಶಿಫ್ಟ್ ಮಾಡಿಸಿ ಎಂದರು.
ಪರವಾನಿಗೆ ಇರುವವರೆಗೆ ಅಲ್ಲೇ ಇರಲಿ ಎಂದರೂ ವಿಪಕ್ಷೀಯ ಸದಸ್ಯರು ಇದನ್ನು ಬಲವಾಗಿ ವಿರೋಧಿಸಿದರು.
ಈ ಸ್ಟಾಲ್ ನಿಂದಾಗಿ ಸುತ್ತಮುತ್ತ ಪರಿಸರ ದುರ್ನಾತ ಬೀರುತ್ತಿದೆ,ಸಾರ್ವಜನಿಕರು ನಮ್ಮಲ್ಲಿ ದೂರು ನೀಡುತ್ತಿದ್ದಾರೆ,ಕೇವಲ ಐದು ಸಾವಿರ ರೂ.ನೀಡುವ ಅವರ ಬಗ್ಗೆ ನಮಗೇಕೆ ಅಷ್ಟು ಪ್ರೀತಿ ? ಎಂದು ಪುರಂದರ ದೇವಾಡಿಗ ಪ್ರಶ್ನಿಸಿದರು.
ಎಸ್.ಸಿ, ಎಸ್.ಟಿ.ಯವರಿಗೆ ಮೀನುಗಾರಿಕಾ ನಿಗಮದಿಂದ ಹತ್ತು ಸ್ಟಾಲ್ ಗಳು ಮಂಜೂರಾಗಿ ಬಂದರೆ ನೀವು ಅದೇ ಪರಿಸರದಲ್ಲಿ ಇಡಲು ಅನುಮತಿ ನೀಡುತ್ತೀರಾ ? ಪುರಸಭೆಯಲ್ಲಿ ನಿರ್ಣಯವಾಗದೆ ನೀವು ಏಕಾಏಕಿಯಾಗಿ ಹೇಗೆ ಕಾರ್ಯಾಚರಣೆ ನಡೆಸಿದ್ದೀರಿ ? ಎಂದು ಸದಸ್ಯ ಕೊರಗಪ್ಪ ಅವರು ಪ್ರಶ್ನಿಸಿದರು.
ಈ ಮೀನಿನ ವಿಚಾರದಲ್ಲೇ ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳು ನಡೆದು ಕೊನೆಗೆ ಸಾರ್ವಜನಿಕ ದೂರುಗಳಿದೆ ಎಂದು ಆ ಸ್ಟಾಲ್ ನವರಿಗೆ ನೋಟೀಸು ನೀಡುವುದೆಂದು ನಿರ್ಧರಿಸಲಾಯಿತು.
ಇದಕ್ಕೂ ಮುನ್ನ ನಡೆದ ಅಮೃತ್-2 ಯೋಜನೆಯಡಿಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲುದ್ದೇಶಿಸಿರುವ ಕುಡಿಯುವ ನೀರು ಸರಬರಾಜು ಯೋಜನೆ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಲು ಬಂದಿದ್ದರು.
ಪ್ರಸ್ತುತ ಅನುಷ್ಠಾನಗೊಳಿಸಲುದ್ದೇಶಿಸಿರುವ ಯೋಜನೆಯಿಂದ ಕೆಲವೊಂದು ವಾರ್ಡ್ ಗಳನ್ನು ಕೈ ಬಿಡಲಾಗಿದೆ ,ಪುರಸಭಾ ಸದಸ್ಯರು, ಮುಖ್ಯಾಧಿಕಾರಿ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿಮಗೆ ಬೇಕಾದಂತೆ ನಕ್ಷೆ ತಯಾರಿಸಿದ್ದೀರಿ,ಶಾಸಕರ ಪ್ರಯತ್ನದಿಂದಾಗಿ 77 ಕೋಟಿಯ ಈ ಬೃಹತ್ ಯೋಜನೆ ಮೂಡುಬಿದಿರೆಗೆ ಮಂಜೂರಾಗಿದೆ,ಇದರಿಂದ ಯಾರಿಗೂ ಅನ್ಯಾಯವಾಗಬಾರದೆಂದು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಇನ್ನೊಮ್ಮೆ ಅಧಿಕಾರಿಗಳಲ್ಲಿ ಚರ್ಚಿಸಿ ಹಿರಿಯ ಸದಸ್ಯರನ್ನು ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.
‌ ಸದಸ್ಯರಾದ ಪಿ.ಕೆ.ಥೋಮಸ್, ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಪ್ರಸಾದ್ ಕುಮಾರ್, ಕರೀಮ್, ರೂಪಾ ಸಂತೋಷ್ ಶೆಟ್ಟಿ, ಮಮತಾ ಆನಂದ್,ರಾಜೇಶ್ ನಾಯ್ಕ್,ದಿವ್ಯ, ಶ್ವೇತ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಮುಖ್ಯಾಧಿಕಾರಿ ಇಂದು ಎಂ.ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು