ಬಹುನಿರೀಕ್ಷೆ ಇಟ್ಟುಕೊಂಡ ಮೂಡುಬಿದಿರೆಯ ಇಂದಿರಾ ಕ್ಯಾಂಟಿನ್ ನ ಕೆಲಸಗಳೆಲ್ಲಾ ಮುಕ್ಕಾಲು ಅಂಶ ಮುಗಿದಿದೆ.ಉಳಿದ ಕೆಲಸಗಳು ಯಾವಾಗ ಪೂರ್ಣಗೊಳ್ಳುತ್ತದೆ ಮತ್ತು ಯಾವಾಗ ಪ್ರಾರಂಭವಾಗುತ್ತದೆ? ಎನ್ನುವುದು ಸದ್ಯದ ಪ್ರಶ್ನೆ.
ಅತೀ ಕಡಿಮೆ ಬೆಲೆಗೆ ಜನರಿಗೆ ಹೊಟ್ಟೆ ತುಂಬಾ ಊಟ, ತಿಂಡಿ ಸಿಗಬೇಕೆಂಬ ಸದುದ್ದೇಶದಿಂದ ರಾಜ್ಯ ಸರಕಾರವು ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಜಾರಿಗೆ ತಂದಿದ್ದು ಇದು ರಾಜ್ಯದ ಹಲವೆಡೆ ಈಗಾಗಲೇ ಪ್ರಾರಂಭಗೊಂಡಿದೆ.
ಮೂಡುಬಿದಿರೆಗೂ ಇಂದಿರಾ ಕ್ಯಾಂಟಿನ್ ಮಂಜೂರಾಗಿ ತಾಲೂಕು ಕಚೇರಿಯ ಸರಿಯಾಗಿ ಎದುರು ಪುರಸಭೆಯು ಜಾಗ ಗುರುತಿಸಿಕೊಟ್ಟಿದೆ.ಅಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ನಡೆದು ಸುಮಾರು ಮುಕ್ಕಾಲು ಅಂಶ ಕೆಲಸ ಪೂರ್ಣಗೊಂಡಿದೆ. ಹೊಟೇಲ್ ಗೆ ಬೇಕಾದ ಒಂದೊಂದೇ ಐಟಮ್ ಗಳು ಬಂದು ಬಿದ್ದಿದೆ.
ಇನ್ನು ಬಾಕಿ ಉಳಿದಿರುವುದು ಕೆಲವೇ ಕೆಲವು ಕೆಲಸಗಳು. ಬೆಂಗಳೂರು ಮೂಲದ ಗುತ್ತಿಗೆದಾರರೊಬ್ಬರಿಗೆ ಇದರ ಗುತ್ತಿಗೆ ಸಿಕ್ಕಿದ್ದು ಅವರು ಉಳಿದ ಕೆಲಸವನ್ನು ಶೀಘ್ರದಲ್ಲಿ ಮುಗಿಸಿಕೊಡಬೇಕಾಗಿದೆ.
ಕಟ್ಟಡದ ಕೆಲಸಗಳೆಲ್ಲಾ ಪೂರ್ಣಗೊಂಡ ಕೂಡಲೇ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ನಲ್ಲಿ ಯಾರಿಗೆ ಚಾನ್ಸ್ ಸಿಗುತ್ತದೋ ಅವರು ಇಂದಿರಾ ಕ್ಯಾಂಟಿನ್ ನ್ನು ಮುಂದುವರಿಸುತ್ತಾರೆ. ಗುತ್ತಿಗೆದಾರ ಮನಸ್ಸು ಮಾಡಿದರೆ ಈ ಎಲ್ಲಾ ಪ್ರಕ್ರಿಯೆಗಳು ಆದಷ್ಟು ಬೇಗದಲ್ಲೇ ಆಗಿ ಬಡವರ ಕ್ಯಾಂಟಿನ್ ಪ್ರಾರಂಭಗೊಂಡು ಅತಿ ಕಡಿಮೆ ಬೆಲೆಗೆ ಇಡ್ಲಿ ಸಾಂಬಾರ್ ಸಹಿತ ತಿಂಡಿಗಳು ,ಮಧ್ಯಾಹ್ನದ ಊಟ ಸಿಗುತ್ತದೆ.ಈ ಭಾಗದ ಜನರು ಆ ದಿನಕ್ಕಾಗಿ ಕಾಯುತ್ತಿದ್ದಾರೆ.
