ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಹಾಗೂ ಗುಡ್ ಸಮರಿತಾನ್ ಸಿಂಗಾಪುರ್ ಸಂಸ್ಥೆಗಳ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಹಾಗೂ ಮೂವರು ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿದ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ ಮೂಡುಬಿದಿರೆಯ ಕೋರ್ಪುಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಸಮಾಜ ಸೇವಕರಾದ ಹನೀಫ್ ರಹ್ಮಾನಿಯಾ,ಬಾಸಿಲ್ ಪ್ರಕಾಶ್ ಮಿನೇಜಸ್ ಹಾಗೂ ಕೆ.ಇ.ಬಿ.ಲೈನ್ ಮೆನ್ ರಾಜ ಕೆ.ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೋರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರುಗಳಾದ ವಂ.ಓನಿಲ್ ಡಿಸೋಜ ಅವರು ಮಾತನಾಡಿ ‘ಸುನಿಲ್ ಮೆಂಡೋನ್ಸ ನೇತೃತ್ವದ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್’ ಎಂಬ ಸೇವಾ ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ ಹಲವಾರು ಸಮಾಜಮುಖಿ ಸೇವೆಯ ಮೂಲಕ ಬಡಜನರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ, ಸುಮಾರು ಒಂದು ಕೋಟಿಗೂ ಅಧಿಕ ಆರ್ಥಿಕ ಸಹಾಯ ನೀಡಿದೆ,ಈ ಸಂಸ್ಥೆಯ ಸೇವಾ ಕಾರ್ಯಗಳು ಇನ್ನಷ್ಟು ನಡೆಯಲಿ’ ಎಂದು ಹಾರೈಸಿದರು.
ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರುಗಳಾದ ವಂ.ಗ್ರೆಗರಿ ಡಿಸೋಜ,ಗಂಟಾಲ್ಕಟ್ಟೆ ನಿತ್ಯ ಸಹಾಯಮಾತಾ ದೇವಾಲಯದ ಧರ್ಮಗುರುಗಳಾದ ವಂ.ರೊನಾಲ್ಡ್ ಡಿಸೋಜ,ವಕೀಲರಾದ ಶ್ವೇತಾ ಜೈನ್, ಸ್ಪೂರ್ತಿ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್,ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತಾ ಡಿಮೆಲ್ಲೊ,ಉದ್ಯಮಿ ಅನ್ವರ್ ಹಾಗೂ ಎ.ಜಿ.ಸೋನ್ಸ್ ಐ.ಟಿ.ಐ.ನ ಉಪನ್ಯಾಸಕ ಶಿವಪ್ರಸಾದ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥೆಯ ಅಧ್ಯಕ್ಷ ಸುನಿಲ್ ಮೆಂಡೋನ್ಸ ಸ್ವಾಗತಿಸಿದರು. ಲತೇಷಿಯಾ ಗೋಮ್ಸ್ ಸಂಸ್ಥೆಯ ವರದಿ ವಾಚಿಸಿದರು.ರಿಚರ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸರ್ವಧರ್ಮದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
