ಅದು 2003 ನೆ ಇಸವಿ. ಮೂಡುಬಿದಿರೆಯಲ್ಲಿ ಸರ್ವರ ಸಹಕಾರದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 71 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬಂದಿದ್ದರು.
ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಕೃಷ್ಣ ಅವರು ಬರಬೇಕಿತ್ತು.ಆದರೆ ಅಂದು ಅವರಿಗೆ ಬರಲಿಕ್ಕಾಗಿರಲಿಲ್ಲ.
ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ, ಮೂಡುಬಿದಿರೆಯ ಇತಿಹಾಸದಲ್ಲಿ ಒಂದು ಅತಿದೊಡ್ಡ, ಅತೀ ವಿಜೃಂಭಣೆಯ ಕಾರ್ಯಕ್ರಮವಾಗಿದ್ದ ಸಾಹಿತ್ಯ ಸಮ್ಮೇಳನವನ್ನು ಕೃಷ್ಣ ಅವರ ಅನುಪಸ್ಥಿತಿಯಲ್ಲಿ ಅಂದಿನ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಿದ್ದರು.
ಉದ್ಘಾಟನಾ ದಿನ ಬರಲು ಅಸಾಧ್ಯವಾಗಿದ್ದ ಎಸ್.ಎಂ.ಕೃಷ್ಣ ಅವರು ಎರಡನೇ ದಿನ ಭಾಗವಹಿಸಿದ್ದರು.ಆದರೆ ತಡವಾಗಿ ಬಂದಿರುವುದರಿಂದ ಅವರು ವೇದಿಕೆಗೆ ಹೋಗಿರಲಿಲ್ಲ.ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್, ಡಾ.ಡಿ.ವೀರೇಂದ್ರ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ,ಕಮಲಾ ಹಂಪನಾ,ಶಾಸಕರಾಗಿದ್ದ ಅಭಯಚಂದ್ರ, ಬ್ಲೇಸಿಯಸ್ ಡಿಸೋಜ, ಬಿ.ಎಂ.ಇದಿನಬ್ಬ ಸಹಿತ ಇತರ ಪ್ರಮುಖರೊಂದಿಗೆ ವೇದಿಕೆಯ ಮುಂಭಾಗದಲ್ಲಿ ಕೆಲಕಾಲ ಕುಳಿತು ತೆರಳಿದ್ದರು.
ಚಿತ್ರ ಕೃಪೆ: ಎಂ.ಗಣೇಶ್ ಕಾಮತ್,ಮೂಡುಬಿದಿರೆ
