ಮಂಗಳೂರು-ಮೂಡುಬಿದಿರೆ ನಡುವೆ ಕೆ.ಎಸ್.ಆರ್.ಟಿ.ಸಿ.ಬಸ್ ಸೇವೆ ಕೊನೆಗೂ ಆರಂಭಗೊಂಡಿದೆ,ಇದು ನಮ್ಮ ದಶಕದ ಹೋರಾಟದ ಫಲ,ಬಸ್ ಸೇವೆ ಆರಂಭಿಸಿದ ಸರಕಾರ ಮತ್ತು ಈ ಸೇವೆ ಆರಂಭಗೊಳ್ಳಲು ಶ್ರಮಿಸಿದ ಸರ್ವರನ್ನೂ ನಾವು ಅಭಿನಂದಿಸಿತ್ತೇವೆ ಎಂದು ಭಾರತೀಯ ರೈತ ಸೇನೆ ಮೂಡುಬಿದಿರೆ ಘಟಕದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಅವರು ಹೇಳಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಲವು ಶಿಕ್ಷಣ ಸಂಸ್ಥೆಗಳು, ಸಾವಿರಾರು ವಿದ್ಯಾರ್ಥಿಗಳು ಇರುವ ಮೂಡುಬಿದಿರೆಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭಿಸಬೇಕೆಂದು ನಾವು ದಶಕದಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ,ಮುಖ್ಯಮಂತ್ರಿಗಳು, ಸಾರಿಗೆ ಸಚಿವರು,ಸ್ಥಳೀಯ ಶಾಸಕರಿಗೆ ಮನವಿ ನೀಡುತ್ತಲೇ ಬಂದಿದ್ದೇವೆ,ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸನ್ನೂ ದಾಖಲಿಸಿದ್ದೇವೆ,ಜಿಲ್ಲೆಯ ಇತರ ತಾಲೂಕುಗಳಲ್ಲಿ ಬಸ್ ಸೇವೆ ಇರುವಾಗ ನಮ್ಮ ತಾಲೂಕಿನಲ್ಲೇಕಿಲ್ಲ ಎಂಬ ಪ್ರಶ್ನೆ ನಮ್ಮದಾಗಿತ್ತು,ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ಖಾಸಗಿ ಬಸ್ ಗಳ ಲಾಬಿಯಿಂದ ವಿಳಂಬವಾಗಲು ಕಾರಣವಾಗಿದೆ,ಕೊನೆಗೂ ಬಸ್ ಸೇವೆ ಆರಂಭಗೊಂಡಿರುವುದು ಸಂತೋಷ ಎಂದರು.
ಮೂಡುಬಿದಿರೆಯ ರಿಂಗ್ ರೋಡ್ ಬಳಿ ಎಂಟು ಎಕರೆ ಸರಕಾರಿ ಜಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತು ಡಿಪೊ ಆಗಬೇಕೆನ್ನುವುದು ನಮ್ಮ ಆಗ್ರಹವಾಗಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.
ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಎ.ಉಪಾಧ್ಯಕ್ಷ ರಮೇಶ್ ಬೋಧಿ,ಸಂಘಟನಾ ಕಾರ್ಯದರ್ಶಿಗಳಾದ ಶಿವರಾಮ ಜೆ.ಶೆಟ್ಟಿ ಹಾಗೂ ವಿಶ್ವನಾಥ ಬೋವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
