ಇಂದು ಬೆಳಿಗ್ಗೆ ಕೊಣಾಜೆಕಲ್ಲಿನಲ್ಲಿ ಸಂಭವಿಸಿದ ಘಟನೆಯಲ್ಲಿ ಓರ್ವ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದು ಆತ ಮಂಗಳೂರಿನ ಸಿ.ಎ.ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಮಂಗಳೂರಿನಿಂದ ಮನೋಜ್ ಹಾಗೂ ಕಾರ್ತಿಕ್ ಇಬ್ಬರು ದ್ವಿಚಕ್ರ ವಾಹನದಲ್ಲಿ ಕೊಣಾಜೆಕಲ್ಲಿಗೆ ಟ್ರಕ್ಕಿಂಗ್ ಗೆಂದು ಬಂದಿದ್ದರು. ಅವರಿಬ್ಬರೂ ಮಂಗಳೂರಿನಲ್ಲಿ ಸಿ.ಎ.ವಿದ್ಯಾರ್ಥಿಗಳು.
ಗೆಳೆಯ ಕಾರ್ತಿಕ್ ನೊಂದಿಗೆ ಬಂದಿದ್ದ ಮನೋಜ್ ಕೊಣಾಜೆಕಲ್ಲಿಗೆ ಹತ್ತಿದ್ದ. ಮೇಲೆ ಹತ್ತಿದ್ದವನಿಗೆ ಹೃದಯಾಘಾತವಾಗಿದೆ.ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಮನೋಜ್ ಪುತ್ತೂರಿನ ಬೆಟ್ಟಂಪಾಡಿಯವನಾದರೆ ಕಾರ್ತಿಕ್ ಕಾಸರಗೋಡು ಸಮೀಪದ ಅದೂರಿನವನಾಗಿದ್ದಾನೆ.
ಕೊಣಾಜೆಕಲ್ಲಿನಲ್ಲಿ ಈ ಹಿಂದೆಯೂ ಕೆಲವು ದುರಂತಗಳು ನಡೆದಿದ್ದು ಸ್ಥಳೀಯಾಡಳಿತದ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣವೆನ್ನಲಾಗುತ್ತಿದೆ.
ಈ ಪ್ರದೇಶಕ್ಕೆ ವಿದ್ಯಾರ್ಥಿಗಳು ಸಹಿತ ಯುವ ಸಮೂಹ ಬರುತ್ತಿದೆ.ಹಾಗೆ ಬಂದವರನ್ನು ವಿಚಾರಿಸುವ ಅಥವಾ ಅವರಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಇಲ್ಲ.ಇನ್ನಾದರೂ ಸ್ಥಳೀಯಾಡಳಿತ ಅಥವಾ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಭಾಗದ ಜನರು ಒತ್ತಾಯಿಸಿದ್ದಾರೆ.






