ಮೂಡುಬಿದಿರೆಯಲ್ಲಿ ಅಕ್ರಮ ಸಕ್ರಮ ಸಮಿತಿ ಇದೆ,ಆದರೆ ಅದರ ಅಧ್ಯಕ್ಷರಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರು ಸಮಿತಿ ರಚನೆಯಾದ ಬಳಿಕ ಒಂದು ಬಾರಿಯೂ ಸಭೆ ಕರೆದಿಲ್ಲ, ಇದರಿಂದ ಸಾವಿರಾರು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ,ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ, ಬಡ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಶಾಸಕ ಕೋಟ್ಯಾನ್ ಅವರು ಕೂಡಲೇ ಈ ಸಮಸ್ಯೆಗೆ ಸ್ಪಂದಿಸಿ ಕೂಡಲೇ ಸಮಿತಿಯ ಸಭೆ ನಡೆಸಬೇಕೆಂದು ಅಕ್ರಮ ಸಕ್ರಮ ಸಮಿತಿ ಸದಸ್ಯ, ಕೆಡಿಪಿ ಮಾಜಿ ಸದಸ್ಯ, ಎಪಿಎಂಸಿ ಮಾಜಿ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಅವರು ಆಗ್ರಹಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಈ ಹಿಂದಿನ ಅವಧಿಯಲ್ಲಿ ಕೇವಲ ಮೂರು ಸಭೆಗಳು ಮಾತ್ರ ನಡೆದಿದೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಸಭೆ ನಡೆಸದೆ ಬಡ ಜನರಿಗೆ ಅನ್ಯಾಯವಾಗುತ್ತಿದೆ, ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಬಡ ಜನರು ಆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ, ಶಾಸಕರ ಈ ನಡೆ ಸರಿಯಲ್ಲ,ಅವರು ಕೂಡಲೇ ಸಭೆ ನಡೆಸಿ ಅರ್ಹರಿಗೆ ಸವಲತ್ತು ಸಿಗುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಮೂನೆ 50, 53 ಹಾಗೂ 57 ರಡಿಯಲ್ಲಿ ಅರ್ಜಿ ಸಲ್ಲಿಸಿದವರು ಸಾವಿರಾರು ಮಂದಿ ಇದ್ದಾರೆ,ಅವರೆಲ್ಲ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ ಎಂದ ಅವರು ಯಾವ ಯಾವ ನಮೂನೆಗಳಲ್ಲಿ ಎಷ್ಟೆಷ್ಟು ಅರ್ಜಿಗಳು ವಿಲೇವಾರಿಯಾಗಲು ಬಾಕಿ ಇದೆ French ಅಂಕಿ ಅಂಶಗಳನ್ನು ಹೇಳಿದರು.

ಅಲ್ಲದೆ ಬಿಜೆಪಿ ಮುಖಂಡರೋರ್ವರು ತಾನು ಅಕ್ರಮ ಸಕ್ರಮ ವಿಲೇವಾರಿ ಮಾಡಿಕೊಡುತ್ತೇನೆಂದು ಕೆಲ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಸಮಿತಿಯಿಂದಲೇ ಈ ಕೆಲಸ ನಡೆಯದಿರುವಾಗ ಅವರು ಮಾಡಿಕೊಡೋದಾದರೂ ಹೇಗೆ ಎಂದೂ ಅವರು ಪ್ರಶ್ನಿಸಿದರು.
ಸಮಿತಿ ಸದಸ್ಯರಾದ ಕರುಣಾಕರ್, ಮರಿಟಾ ಮಿನೇಜಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






