ಕೋಟೆಬಾಗಿಲಿನಿಂದ ಶಿರ್ತಾಡಿವರೆಗಿನ ರಸ್ತೆಯಲ್ಲಿ ಅಲ್ಪಲ್ಪ ಬಿದ್ದಿದ್ದ ಗುಂಡಿಗಳಿಂದ,ಕೆಲವೊಂದು ಅಪಾಯಕಾರಿ ಗುಂಡಿಗಳಿಂದ ಸಾರ್ವಜನಿಕರು,ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು ಶಿರ್ತಾಡಿಯ ಆಪತ್ಬಾಂಧವ ಸೂರಜ್ ಜೈನ್ ಅವರು ಶಿರ್ತಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಅವರ ಗಮನಕ್ಕೆ ತಂದು ಇದಕ್ಕೆ ಏನಾದರೊಂದು ಪರಿಹಾರ ಒದಗಿಸಬೇಕೆಂದು ಹೇಳಿದ್ದರು.
ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ಗುಂಡಿ ಮುಚ್ಚಲು ಮುಂದಾದ ಸಂತೋಷ್ ಕೋಟ್ಯಾನ್ ಅವರಿಗೆ ಅವರ ಸ್ನೇಹಿತರೂ ಸಹಕರಿಸಿದರು.
ಸಂತೋಷ್ ಕೋಟ್ಯಾನ್ ಅವರು ತಮ್ಮ ಸ್ವಂತ ಖರ್ಚಲ್ಲೇ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಕಾಂಕ್ರೀಟ್ ಹಾಕಿಸಿದ್ದಲ್ಲದೆ ತಾನೂ ಶ್ರಮದಾನದಲ್ಲಿ ಪಾಲ್ಗೊಂಡರು.
ಅವರ ಸ್ನೇಹಿತರಾದ ಚಂದ್ರ ಎಸ್.ಕೋಟ್ಯಾನ್, ಶ್ರೀಧರ್ ಎಸ್.ಅಮೀನ್, ಸಂದೀಪ್ ಕುಲಾಲ್, ದಿನೇಶ್ ಗಡ್ಡ,ವಿಶ್ವನಾಥ ಕಲ್ಲೊಟ್ಟು ಹಾಗೂ ಪ್ರದೀಪ್ ಎಸ್.ಕೋಟ್ಯಾನ್ ಅವರು ಈ ಸಮಾಜಮುಖಿ ಕಾರ್ಯದಲ್ಲಿ ಸಹಕರಿಸಿದರು.
ಸಂತೋಷ್ ಕೋಟ್ಯಾನ್ ಹಾಗೂ ಅವರ ಸ್ನೇಹಿತರ ತಂಡದ ಈ ಸಾಮಾಜಿಕ ಸೇವೆಗೆ ಈಭಾಗದ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
” ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆಯೆಂದು ನಮ್ಮ ಗಮನಕ್ಕೆ ಬಂದಾಗ ಅದನ್ನು ಸ್ಥಳೀಯಾಡಳಿತವೋ,ಇನ್ಯಾರೋ ಪರಿಹರಿಸಬೇಕೆಂದು ಕಾಯದೆ ನಮ್ಮಿಂದ ಸಾಧ್ಯವಾದಷ್ಟು ತಕ್ಷಣ ಪರಿಹಾರಕ್ಕೆ ಮುಂದಾಗಬೇಕಿರುವುದು ಪ್ರತಿಯೋರ್ವರ ಜವಾಬ್ದಾರಿಯಾಗಬೇಕು,ನಾವಿಲ್ಲಿ ಅದನ್ನೇ ಮಾಡಿದ್ದೇವೆ, ನನ್ನೊಂದಿಗೆ ನನ್ನ ಸ್ನೇಹಿತರು ತಮ್ಮದೇ ಮನೆಯಂಗಳದ ಕೆಲಸವೆಂಬಂತೆ ಶ್ರಮಿಸಿದ್ದಾರೆ, ಅವರ ಶ್ರಮ ಮತ್ತು ಸಹಕಾರ ಈ ಕಾರ್ಯದ ಯಶಸ್ಸಿನ ಶಕ್ತಿ ” ಎಂದು ಸಂತೋಷ್ ಕೋಟ್ಯಾನ್ ಅವರು ಹೇಳಿದ್ದಾರೆ.








































