ಶಿಕ್ಷಣ ಕ್ಷೇತ್ರದಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಪ್ರಸ್ತುತ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಮುಹಮ್ಮದ್ ಸದಾಕತ್ ಅವರು 2026 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಿದ್ದಕಟ್ಟೆಯ ಸಂತ ಪ್ಯಾಟ್ರಿಕ್ ಶಾಲೆಯಲ್ಲಿ ಪ್ರಾಥಮಿಕ, ಸಿದ್ದಕಟ್ಟೆಯಲ್ಲಿಯೇ ಪ್ರೌಢ ಶಿಕ್ಷಣವನ್ನು ಮುಗಿಸಿ ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಬಳಿಕ ಮಂಗಳೂರು ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ತಮ್ಮ ಶೈಕ್ಷಣಿಕ ಪದವಿಯನ್ನು ಮುಂದುವರಿಸಿದರು.
ಸಿದ್ದಕಟ್ಟೆ ಪಟ್ನಾ ಮನೆಯ ದಿ.ಮೂಲರಪಟ್ನ ಆಲಿಯಬ್ಬ ಅವರ ಹಿರಿಯ ಪುತ್ರನಾಗಿರುವ ಇವರ ಪತ್ನಿ ಪ್ರಸ್ತುತ ವಾಮದಪದವು ಸರಕಾರಿ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಕೂಡಾ ವೈದ್ಯೆಯಾಗಿದ್ದು ಮಗ ಇಂಜಿನಿಯರ್ ಆಗಿದ್ದಾರೆ.
ಇವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪುರಸ್ಕಾರ,ನವದೆಹಲಿಯ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ವತಿಯಿಂದ ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರಾಚಾರ್ಯ ಪ್ರಶಸ್ತಿ, ದ.ಕ.ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಸಂಘದ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಮುಂಬಯಿನ ಇಂಡಿಯನ್ ಡೇಲೆಂಟ್ ಒಲಿಂಪಿಯಾಡ್ ವತಿಯಿಂದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ಲಭಿಸಿದೆ.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಸದಾಕತ್ ಅವರಿಗೆ ಅವರ ಅಪಾರ ಸ್ನೇಹಿತರು, ಕುಟುಂಬಸ್ಥರು , ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.












