ಹೈಕೋರ್ಟ್ ಆದೇಶ. ಪಡುಮಾರ್ನಾಡಿನಲ್ಲಿ ಅನಧಿಕೃತ ಕಟ್ಟಡ ತೆರವು

Picture of Namma Bedra

Namma Bedra

Bureau Report

ಮೂಡುಬಿದಿರೆ:ಪಡುಮಾರ್ನಾಡು ಗ್ರಾಮ ಪಂಚಾಯತ್ ಎದುರು ರಸ್ತೆ ಮಾರ್ಜಿನ್ ಅತಿಕ್ರಮಿಸಿ ಅನಧಿಕೃತವಾಗಿ ವಿಸ್ತರಿಸಿದ ಕಟ್ಟಡವನ್ನು ಹೈಕೋರ್ಟ್ ಆದೇಶದಂತೆ ಮಂಗಳವಾರ ತೆರವುಗೊಳಿಸಲಾಯಿತು.
ಪಡುಮಾರ್ನಾಡಿನ ಸೂರಜ್ ಜೈನ್ ಮತ್ತು ಇತರರು ರಸ್ತೆ ಮಾರ್ಜಿನನ್ನು ಅತಿಕ್ರಮಿಸಿ ಕಟ್ಟಡವನ್ನು ವಿಸ್ತರಿಸಿದ್ದು ಮತ್ತು ಕಟ್ಟಡ ವಿಸ್ತರಣೆಗೆ ಪಂಚಾಯತ್‍ನಿಂದ ಅನುಮತಿ ಪಡೆಯದೆ ಇದ್ದದ್ದು ಹಾಗು ಹತ್ತಿರದಲ್ಲಿ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆಂಬ ಆರೋಪಿಸಲಾಗಿತ್ತು. ಈ ಬಗ್ಗೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು 2024ರಲ್ಲಿ ಅಭಿನಂದನ್ ಬಲ್ಲಾಳ್, ಮಹ್ಮದ್ ಅಸ್ಲಂ ಮತ್ತು ಹರೀಶ್ ಹೆಗ್ಡೆ ಅವರು ಪಡುಮಾರ್ನಾಡು ಪಂಚಾಯತ್ ಹಾಗೂ ದ.ಕ ಜಿಲ್ಲಾ ಪಂಚಾಯತ್‍ಗೆ ದೂರು ನೀಡಿದ್ದರು. ಆದರೆ ಕಟ್ಟಡ ತೆರವಿಗೆ ಆಗಿನ ಪಂಚಾಯತ್ ಆಡಳಿತ ಕ್ರಮ ಕೈಗೊಳ್ಳಲು ನಿರಾಸಕ್ತಿ ವಹಿಸಿತ್ತೆನ್ನಲಾಗಿದೆ. ಇದರ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೆಟ್ಟಲೇರಿದ್ದರು. ದೂರಿನಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಎಸ್ ಮತ್ತು ಪಡುಮಾರ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿಸಿದ್ದರು.
ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದು ಅತಿಕ್ರಮಿತ ಕಟ್ಟಡ ಹಾಗೂ ಸ್ವಾಧೀನಪಡಿಸಿಕೊಂಡಿರುವ ಸರಕಾರಿ ಜಮೀನನನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಹೈಕೋರ್ಟ್ ಕಳೆದ ಎಪ್ರಿಲ್‍ನಲ್ಲಿ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಸೂರಜ್ ಜೈನ್ ಪರ ವಕೀಲರು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ಮೇಲ್ಮನವಿ ತಿರಸ್ಕøತಗೊಂಡಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಡುಮಾರ್ನಾಡು ಪಂಚಾಯತ್ ಅಧಿಕಾರಿಗಳು ಮಂಗಳವಾರ ಅತಿಕ್ರಮಣ ತೆರವಿಗೆ ಕ್ರಮ ಕೈಗೊಂಡಿದ್ದಾರೆ. ಇನ್ನೊಂದೆಡೆ ಕಟ್ಟಡ ಮಾಲೀಕರು ಕೂಡ ಅತಿಕ್ರಮಣ ಭಾಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲಾರಂಭಿಸಿದ್ದಾರೆನ್ನಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top