ಅಲ್ಪಸಂಖ್ಯಾತರೇ ಹೆಚ್ಚಿರುವ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಚಾನ್ಸ್ ಸಿಗಲಿ. *ಅಲ್ಪ ಸಂಖ್ಯಾತರು ಜೈ ಹಾಕಲು, ಬ್ಯಾನರ್ ಕಟ್ಟಲು ಮಾತ್ರನಾ?

Picture of Namma Bedra

Namma Bedra

Bureau Report

ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಈಸರ್ತಿ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಒಟ್ರಾಸಿ ಗಡಿಬಿಡಿ ಶುರುವಾಗಿದೆ ಮಾರ್ರೆ..!
ಬಿಜೆಪಿ ಮತ್ತು ಕಾಂಗ್ರೆಸ್ ಎಂದಿನಂತೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯ್ಕೆಯ ಕಸರತ್ತಿನಲ್ಲಿರುವಾಗಲೇ ‘ ನಾವು ಬ್ಯಾನರ್ ಕಟ್ಟಲು, ಪ್ರತಿಭಟನೆಗೆ ಸೇರಲು,ಜೈ ಹಾಕಲು, ಓಟಿನ ಫೀಲ್ಡಿಗೆ ಹೋಗಲು ಮಾತ್ರನಾ? ನಮಗೆ ಒಮ್ಮೆಯಾದರೂ ಅವಕಾಶ ಸಿಗಲಿ, ನಾವು ಕೂಡಾ ‘ ಸಾಮಾನ್ಯ’ರಲ್ಲ, ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ನಮಗೂ ಸ್ಪರ್ಧಿಸುವ ಅವಕಾಶವಿದೆ, ಪಕ್ಷ ಅವಕಾಶ ಕೊಡದಿದ್ದರೆ ನೋ ಪ್ರಾಬ್ಲೆಮ್, ಪಕ್ಷೇತರರಾಗಿ ಸ್ಪರ್ಧಿಸಲು ಅವಕಾಶವಿದೆ’ ಎಂಬ ಮಾತುಗಳು ಅಲ್ಪಸಂಖ್ಯಾತ ವಲಯದಿಂದ ಕೇಳಿ ಬರುತ್ತಿದೆ.
ಒಂದರ್ಥದಲ್ಲಿ ಈ ಮಾತು ಸರಿಯಾಗಿಯೇ ಇದೆ ಅನಿಸುತ್ತದೆ.ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಒಮ್ಮೆಕೂಡಾ ಅಲ್ಪಸಂಖ್ಯಾತರಾದ ಮುಸ್ಲಿಮರಿಗಾಗಲೀ, ಕ್ರೈಸ್ತರಿಗಾಗಲೀ ಅವಕಾಶ ಸಿಗಲಿಲ್ಲ. ಈಬಾರಿ ಮೀಸಲಾತಿ ಅನುಕೂಲಕರವಾಗಿ ಬಂದಿರುವುದರಿಂದ ಸಹಜವಾಗಿಯೇ ಈ ಕೂಗು ಕೇಳಿ ಬರುತ್ತಿದೆ.
ಮುಸ್ಲಿಂ, ಕ್ರೈಸ್ತರ ಮತಗಳೇ ಈ ಕ್ಷೇತ್ರದಲ್ಲೂ ನಿರ್ಣಾಯಕವಾಗಿದೆ. ಎರಡೂ ಸಮುದಾಯ ಒಟ್ಟಾದರೆ ಗೆಲ್ಲಲೂ ಸಾಧ್ಯವಿದೆ,ಸೋಲಿಸಲೂ ಸಾಧ್ಯವಿದೆ.
ದೊಡ್ಡ ಸಂಖ್ಯೆಯಲ್ಲಿ ಕ್ರೈಸ್ತ, ಮುಸ್ಲಿಂ ಮತದಾರರಿರುವುದರಿಂದ ಅಲ್ಪಸಂಖ್ಯಾತರ ಪರವೆಂದು ಹೇಳಿಕೊಳ್ಳುವ ಪಕ್ಷಕ್ಕೆ ಈಬೇಡಿಕೆ ಮಂಡೆಬಿಸಿಯಾಗಲಿದೆ.
ಹಾಗಂತ ಬಿಜೆಪಿಯನ್ನು ಇತ್ತೀಚಿನಿಂದ ಬೆಂಬಲಿಸುತ್ತಿರುವ ಅಲ್ಪಸಂಖ್ಯಾತರೂ ಇದ್ದಾರೆ.ಅವರು ಕೂಡಾ ಯೋಚನೆ ಮಾಡುವಂತಾಗಿದೆ.
ಕ್ಷೇತ್ರದ ಇರುವೈಲು,ಹೊಸಬೆಟ್ಟು, ತಾಕೊಡೆ,ತೋಡಾರು, ಮಿಜಾರು, ಪುತ್ತಿಗೆ, ಪಾಲಡ್ಕ, ಸಂಪಿಗೆ,ಕಲ್ಲಮುಂಡ್ಕೂರು,.. ಹೀಗೆ ಎಲ್ಲ ಕಡೆಗಳಲ್ಲೂ ಕ್ರೈಸ್ತ,ಮುಸ್ಲಿಂ ಮತದಾರರಿದ್ದಾರೆ.ಕಲ್ಲಮುಂಡ್ಕೂರು ಪರಿಸರದಲ್ಲಿ ಮಾತ್ರ ಒಂದೇ ಒಂದು ಮುಸ್ಲಿಂ ಮತದಾರರಿಲ್ಲವಾದರೂ ಆಭಾಗದಲ್ಲಿ ಕ್ರೈಸ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪರ ಇದ್ದಾರೆ.
ಇರುವೈಲು ಪಂಚಾಯತ್ ಗೆ ಹಲವು ಬಾರಿ ಆಯ್ಕೆಯಾಗಿ ಸದಾ ಜನಸೇವೆಯಲ್ಲಿರುವ ಸೀನಿಯರ್ ಹೀರೋ ವಲೇರಿಯನ್ ಕುಟಿನ್ಹೊ, ಹೊಸಬೆಟ್ಟು ಪರಿಸರದಲ್ಲಿ ಪಂಚಾಯತ್ ಸದಸ್ಯರಾಗಿ ಜನಸೇವಕರಾಗಿರುವ ವಿಲ್ಫ್ರೆಡ್ ಮೆಂಡೋನ್ಸ, ಪಂಚಾಯತ್ ಅಧ್ಯಕ್ಷರಾಗಿ ಸಾಯ್ಲೆಂಟಾಗಿ ಜನಪರ ಕೆಲಸಗಳನ್ನು ಮಾಡುತ್ತಿರುವ ರೆಕ್ಸನ್ ಪಿಂಟೊ, ಬೆದ್ರ ಕಾಂಗ್ರೆಸ್ ವಕ್ತಾರರಾಗಿ ಡೇ & ನೈಟ್ ಸಮಾಜಸೇವಕರಾಗಿರುವ ರಾಜೇಶ್ ಡಿಸೋಜ ಕಡಲಕೆರೆ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ಪಡೆದಿರುವ ಜೋಯ್ಲಸ್ ಡಿಸೋಜ, ಸದಾ ನಾಡಕಚೇರಿ,ಪಂಚಾಯತ್ ಕಚೇರಿ ಅಂತ ಜನರ ಕೆಲಸಗಳನ್ನು ಮಾಡಿಕೊಡುವ ಎಂ.ಎ.ರಝಾಕ್ ತೋಡಾರ್, ತಾ.ಪಂ.ಮಾಜಿ ಸದಸ್ಯರಾಗಿದ್ದ ಎಂ.ಎ.ಎಸ್.ಅಬೂಬಕ್ಕರ್ ಅವರ ಎಂ.ಎ.ಎಸ್.ಆಸಿಫ್, ಪಾಲಡ್ಕ ಪರಿಸರದಲ್ಲಿ ಉದ್ಯಮಿಯಾಗಿ,ಪಂಚಾಯತ್ ಉಪಾಧ್ಯಕ್ಷರಾಗಿ ಜನಪ್ರಿಯರಾಗಿರುವ ಪ್ರವೀಣ್ ಸಿಕ್ವೇರಾ, ಕಾಂಗ್ರೆಸ್ ಯುವ ಮುಖಂಡರಾಗಿ ಪಕ್ಷಕ್ಕಾಗಿ ಸದಾ ಶ್ರಮಿಸುತ್ತಿರುವ ವಸೀರ್ ಪುತ್ತಿಗೆ, ಕಲ್ಲಮುಂಡ್ಕೂರು ಪರಿಸರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸಿಗರಾಗಿ, ಪಂಚಾಯತ್, ಸೊಸೈಟಿಯ ಅಧ್ಯಕ್ಷರಾಗಿ ಗಮನಸೆಳೆದಿರುವ ಜಾಕಿಮ್ ಕೊರೆಯಾ, ಕಳೆದ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಪರ ನಿರ್ಣಾಯಕ ಪಾತ್ರ ವಹಿಸಿದ್ದ ಯುವ ನಾಯಕ, ರಾಜಕೀಯ ತಂತ್ರಗಾರಿಕೆ ಬಲ್ಲ ಯುವಕ ಗ್ಲೆನ್ ವಿಶಾಲ್ ಡಿಸಿಲ್ವಾ ಮುಂತಾದವರೆಲ್ಲ ಅಲ್ಪಸಂಖ್ಯಾತ ಸಮುದಾಯದ ನಾಯಕರೇ ಆಗಿದ್ದಾರೆ.ಇವರೆಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ.
ಪಕ್ಷಗಳು ಮಣೆ ಹಾಕದಿದ್ದಲ್ಲಿ ಎರಡೂ ಸಮುದಾಯ ಒಂದಾಗಿ ಮಾತುಕತೆ ನಡೆಸಿ ಒಮ್ಮತದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ಲಾನ್ ರೆಡಿಯಾಗಿದೆಯೆಂದು ತಿಳಿದು ಬಂದಿದೆ.
ಈ ಪೈಕಿ ಆಸಿಫ್ ತೋಡಾರ್ ಅವರು ಜೆಡಿಎಸ್ ನವರಾಗಿದ್ದು ಅವರು ಮನಸು ಮಾಡಿದರೆ ಜೆಡಿಎಸ್ ನಿಂದ ಅಥವಾ ಪಕ್ಷೇತರರಾಗಿಯೂ ಸ್ಪರ್ಧಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top