ಇದೊಂದು ಗಂಭೀರ ಪ್ರಕರಣ.ಬ್ಯಾಂಕ್ ನವರು ಹೀಗೂ ಮಾಡ್ತಾರಾ ಎಂಬ ಪ್ರಶ್ನೆಗೆ ಅವಕಾಶ ಮಾಡಿಕೊಟ್ಟಿದೆ ಬೆದ್ರದ ಆಕ್ಸಿಸ್ ಬ್ಯಾಂಕ್.
ಬೆದ್ರದ ಗ್ಯಾಸ್ ಏಜೆನ್ಸಿಯಲ್ಲಿ ವೃತ್ತಿ ಮಾಡುತ್ತಿರುವ ರಾಜೇಶ್ ಗೌಡ ಅವರಿಗೆ ಅವರ ತಿಂಗಳ ಸಂಬಳಕ್ಕಾಗಿ ಮೂಡುಬಿದಿರೆಯ ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ಮಾಡಿ ಕೊಡುತ್ತಾರೆ ಅವರ ಮಾಲಕರು.ರಾಜೇಶ್ ಅವರಿಗೆ ಮಾತ್ರವಲ್ಲ, ಹೆಚ್ಚಿನ ಸಿಬ್ಬಂದಿಗಳಿಗೆ ಅದೇ ಬ್ಯಾಂಕ್ ನಲ್ಲಿ ಖಾತೆ ತೆರೆದು ಕೊಡಲಾಗುತ್ತದೆ.
ಕೆಲ ಸಮಯಗಳ ಬಳಿಕ ಅಕ್ಸಿಸ್ ಬಿಟ್ಟು ಬೇರೊಂದು ಬ್ಯಾಂಕ್ ನಲ್ಲಿ ಖಾತೆ ತರೆಯಲಾಗುತ್ತದೆ.ಆದರೆ ಹಿಂದೆ ಇದ್ದ ಆಕ್ಸಿಸ್ ಬ್ಯಾಂಕ್ ನ ಖಾತೆ ಹಾಗೇ ಇರುತ್ತದೆ. ತನ್ನ ಖಾತೆಯನ್ನು ಬೇರೆ ಬ್ಯಾಂಕ್ ನಲ್ಲಿ ಮಾಡಿದ ಬಳಿಕ ಆಕ್ಸಿಸ್ ಬ್ಯಾಂಕ್ ನ ತನ್ನ ಖಾತೆಯಲ್ಲಿದ್ದ ಎಂಟು ಸಾವಿರದ ಪೈಕಿ ಐದು ಸಾವಿರವನ್ನು ರಾಜೇಶ್ ಅವರು ತೆಗೆದಿರುತ್ತಾರೆ.ಮೂರು ಸಾವಿರ ಹಾಗೇ ಇರುತ್ತದೆ. ಅದು ಬಿಟ್ಟರೆ ಬೇರೆ ಯಾವ ವ್ಯವಹಾರವನ್ನೂ ರಾಜೇಶ್ ಅವರು ಮಾಡಿರಲಿಲ್ಲ.
ಆದರೆ 2021 ರಲ್ಲಿ ರಾಜೇಶ್ ಅವರ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್ ನಲ್ಲಿ 4,20,000 ಸಾಲ ಮಂಜೂರಾಗುತ್ತದೆ ಮತ್ತು ಪ್ರತೀ ತಿಂಗಳು 10,893 ರೂ.ನಂತೆ ತಿಂಗಳು ತಿಂಗಳು ಮರುಪಾವತಿಯಾಗುತ್ತಿರುತ್ತದೆ. ಯಾವಾಗ ಬ್ಯಾಂಕ್ ಸಿಬ್ಬಂದಿಗಳು ರಾಜೇಶ್ ಅವರಿಗೆ ಕಾಲ್ ಮಾಡಿ ‘ನಿಮ್ಮ ತಿಂಗಳ ಕಂತು ಬಾಕಿ ಇದೆ,ಲೋನ್ ಬಾಕಿ ಇದೆ ‘ ಎಂದು ಹೇಳುತ್ತಾರೋ ಆವಾಗಲೇ ರಾಜೇಶ್ ಅವರಿಗೆ ತನ್ನ ಹೆಸರಲ್ಲಿ ಸಾಲ ಮಂಜೂರಾದ ವಿಷಯ ಗೊತ್ತಾಗುತ್ತದೆ.
‘ ನಾನು ಸಾಲವೇ ತೆಗೆದಿಲ್ಲ,ನಾನೇಕೆ ಕಟ್ಟಬೇಕು ‘? ಎಂದು ಮರು ಪ್ರಶ್ನಿಸಿದರೆ ‘ ಇಲ್ಲ, ನಿಮ್ಮ ಹೆಸರಲ್ಲಿ ಲೋನ್ ಪಾಸಾಗಿದೆ, ಇನ್ನೂ ಇಷ್ಟಿಷ್ಟು ಬಾಕಿ ಇದೆ ‘ ಎನ್ನುತ್ತಾರೆ ಬ್ಯಾಂಕ್ ನವರು.
ಬ್ಯಾಂಕ್ ಗೆ ಹೋಗಿ ವಿಚಾರಿಸಿದರೆ ಅಲ್ಲಿ ರಾಜೇಶ್ ಅವರ ಹೆಸರಲ್ಲಿ ಸಾಲ ತೆಗೆದಿರುವುದು ಮತ್ತು ತಿಂಗಳ ಕಂತು ಕಟ್ಟಿರುವುದು ಬೆಳಕಿಗೆ ಬರುತ್ತದೆ.ಆಶ್ಚರ್ಯಗೊಂಡ ರಾಜೇಶ್ ಅವರು ಎಲ್ಲ ಡಿಟೈಲ್ಸ್ ಗಳನ್ನು ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ,ಪೊಲೀಸ್ ಅಧಿಕಾರಿಗಳಿಗೆ ತನಗಾದ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.
ರಾಜೇಶ್ ಅವರ ಹೆಸರಿನಲ್ಲಿ ಸಾಲ ತೆಗೆದವರ್ಯಾರು? ಆ ಸಂದರ್ಭದಲ್ಲಿ ಸಲ್ಲಿಸಲಾದ ದಾಖಲೆಗಳು ಎಲ್ಲಿದೆ? ಎನ್ನುವುದು ನಿಗೂಢವಾಗಿದೆ.ಅದಕ್ಕೆ ಬ್ಯಾಂಕ್ ನವರೇ ಉತ್ತರಿಸಬೇಕಿದೆ.
ಯಾವಾಗ ಅಸಲು ಮಾತ್ರ ಸಂದಾಯವಾಗಿ ಬಡ್ಡಿ ಬಾಕಿಯಾಯಿತೋ ಆ ನಂತರವೇ ಬ್ಯಾಂಕ್ ನವರು ರಾಜೇಶ್ ಅವರಿಗೆ ಕಾಲ್ ಮಾಡಲು, ಅವರನ್ನು ಹುಡುಕಿ ಅವರ ಮನೆಗೆ ಹೋಗಲು ಪ್ರಾರಂಭಿಸಿದ್ದು.ತನ್ನದಲ್ಲದ ತಪ್ಪಿಗೆ ತಾನೇಕೆ ಹಣಕಟ್ಟಬೇಕೆಂಬ ರಾಜೇಶ್ ಅವರ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.
ಕೊನೆಗವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದು ತನಗಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರಿಗಾದ ಅನ್ಯಾಯದ ಬಗ್ಗೆ ಅವರು ವಿವರಿಸಿದ್ದಾರೆ.ಆದರೆ ನಿಜವಾದ ವಿಷಯವೇನು? ರಾಜೇಶ್ ಅವರ ಹೆಸರಲ್ಲಿ ಲೋನ್ ಮಾಡಿದವರ್ಯಾರು ? ಎಂಬುವುದನ್ನು ಬ್ಯಾಂಕ್ ನವರು ಉತ್ತರಿಸಲೇಬೇಕಿದೆ.ಯಾಕೆಂದರೆ ಇದೊಂದು ಗಂಭೀರ ಪ್ರಕರಣ. ಬ್ಯಾಂಕ್ ನಲ್ಲಿ ಹೀಗೂ ಆಗುತ್ತದೆ ಎಂದಾದರೆ ಅಂತಹ ಬ್ಯಾಂಕ್ ಗಳ ಮೇಲೆ ಗ್ರಾಹಕರು ವಿಶ್ವಾಸ ಇಡೋದಾದರೂ ಹೇಗೆ ?
ರಾಜೇಶ್ ಅವರ ಆರೋಪದಂತೆ ಇದೊಂದು ದೊಡ್ಡ ವಂಚನೆ.ಈ ರೀತಿ ವಂಚಿಸಿದವರ ವಿರುದ್ಧ ಪ್ರಕರಣ ದಾಖಲಾಗಲೇಬೇಕಲ್ಲವೇ ?