ಕಳೆದ ಹಲವಾರು ವರ್ಷಗಳಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸುತ್ತಾ ಬಂದಿರುವ ಇರುವೈಲು ಪುಚ್ಚಮೊಗರು ಸಮೀಪದ ಎಲಿಯದಲ್ಲಿರುವ ಸಯ್ಯಿದ್ ಡಾ.ಅಬೂಬಕ್ಕರ್ ವಲಿಯುಲ್ಲಾಹಿ (ಖ.ಸಿ.) ದರ್ಗಾದ ಉರೂಸ್ ಮುಬಾರಕ್ ಸಮಾರಂಭವು ಎಪ್ರಿಲ್ 9 ಮತ್ತು 10 ರಂದು ನಡೆಯಲಿದೆ ಎಂದು ಎಲಿಯ ಮನಾರುಲ್ ಹುದಾ ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ಸುಮಾರು 700 ವರ್ಷಗಳಿಂದ ಎಲಿಯಾದಲ್ಲಿ ಅಂತ್ಯವಿಶ್ರಮಿಸಿರುವ ಡಾ.ಅಬೂಬಕ್ಕರ್ ವಲಿಯುಲ್ಲಾಹಿ ( ಖ.ಸಿ.) ಅವರ ದರ್ಗಾವು ದಕ್ಷಿಣ ಭಾರತದ ಖ್ಯಾತ ಆಧ್ಯಾತ್ಮಿಕ ಧಾರ್ಮಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ,ಈ ದರ್ಗಾಕ್ಕೆ ಕಳೆದ ಹಲವಾರು ವರ್ಷಗಳಿಂದ ಯಾವುದೇ ಜಾತಿ ಮತ ಬೇಧವಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ತಮ್ಮ ಕಷ್ಟ ಪರಿಹಾರಗಳಿಗಾಗಿ ಬರುತ್ತಾರೆ, ಪ್ರತೀ ವಾರ ಧಾರ್ಮಿಕ ಕಾರ್ಯಕ್ರಮಗಳು, ಪ್ರತೀ ಎರಡು ವರ್ಷಗಳಿಗೊಮ್ಮೆ ಉರೂಸ್ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ’ ಎಂದರು.
ಎಪ್ರಿಲ್ 9 ರಂದು ಅಸರ್ ನಮಾಝ್ ಬಳಿಕ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಧ್ವಜಾರೋಹಣ ನೆರವೇರಿಸಲಿದ್ದು ಮಗರಿಬ್ ನಮಾಝ್ ಬಳಿಕ ನಡೆಯಲಿರುವ ಉದ್ಘಾಟನಾ ಸಮಾರಂಭವು ಕಾಜೂರು ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಅವರ ನೇತೃತ್ವದಲ್ಲಿ ನಡೆಯಲಿದೆ.ದ.ಕ.ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಮಸೀದಿಯ ಖತೀಬರಾದ ಉಮರ್ ಸ ಅದಿ ಅಲ್ ಅಫ್ಳಲಿ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.

ಎಪ್ರಿಲ್ 10 ರಂದು ಅಸರ್ ನಮಾಝ್ ಬಳಿಕ ಕಾಜೂರು ತಂಙಳ್ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಸಂಜೆ 5-30 ಕ್ಕೆ ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಮಜೀದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರ್ವಧರ್ಮ ಸೌಹಾರ್ದ ಕೂಟವನ್ನು ಆಳ್ವಾಸ್ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ
ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಐ.ರಾಘವೇಂದ್ರ ಅಸ್ರಣ್ಣ,ಹೊಸಬೆಟ್ಟು ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಗ್ರೆಗರಿ ಡಿಸೋಜ, ಯು.ಟಿ.ಖಾದರ್, ಝಮೀರ್ ಅಹ್ಮದ್,ದಿನೇಶ್ ಗುಂಡೂರಾವ್, ಕ್ಯಾ.ಬ್ರಿಜೇಶ್ ಚೌಟ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜ, ಕೆ.ಅಭಯಚಂದ್ರ, ರಮಾನಾಥ ರೈ,ಮಿಥುನ್ ರೈ,ಪದ್ಮರಾಜ್ ಪೂಜಾರಿ, ಕೆ.ಪಿ.ಸುಚರಿತ ಶೆಟ್ಟಿ ಮುಂತಾದ ರಾಜಕೀಯ ಮುಖಂಡರು, ಸಾಮಾಜಿಕ ನೇತಾರರು ಈ ಸಂದರ್ಭದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಅದೇ ದಿನ ಮಗರಿಬ್ ನಮಾಝ್ ಬಳಿಕ ಕಾಜೂರು ತಂಙಳ್ ಅವರ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಸೀದಿ ಕಮಿಟಿಯ ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್, ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್, ಸದಸ್ಯರಾದ ಮುಹಮ್ಮದ್ ಆಸಿಫ್ ಹಾಗೂ ಇಸ್ಮಾಯಿಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.