ಶರಧಿ ಹೋಟೆಲ್. ಮಧ್ಯಾಹ್ನದ ಮೀನಿನೂಟಕ್ಕೆ ರಪ್ಪನೆ ನೆನಪಾಗುತ್ತಿದ್ದದ್ದು, ಬುತ್ತಿ ತಂದ ಈ ಪರಿಸರದ ಹುಡುಗಿಯರಿಗೆ ಸಾಂಬಾರು,ಫ್ರೈ ಬೇಕಾದರೆ ನೆನಪಾಗುತ್ತಿದ್ದದ್ದು ಇದೇ ಶರಧಿ ಹೋಟೆಲ್.
ದೂರದೂರದ ಕಡೆಗೆ ಹೋಗುತ್ತಿದ್ದ ಕೆಲವು ಬಸ್ ಚಾಲಕ,ಕಂಡೆಕ್ಟರ್ ಗಳಿಗೆ ಅರ್ಜೆಂಟಾಗಿ ಬೇಕಾಗುತ್ತಿದ್ದ ಹೋಟೆಲ್ ಇದೇ ಶರಧಿ.
ನಾನು ಮತ್ತು ನಾವು ಈ ಹೋಟೆಲ್ ನಲ್ಲಿ ಅದೆಷ್ಟು ಊಟ ಮಾಡಿದ್ದೆವೋ, ಅದೆಷ್ಟು ಎಲ್ಯ ಮಲ್ಲ ಫ್ರೈ ತಿಂದಿದ್ದೆವೋ,ಅದೆಷ್ಟು ಕೋರಿಸುಕ್ಕ ಪಕ್ಕಪಕ್ಕ ತಿಂದು ಮುಗಿಸಿದ್ದೆವೋ,ಮೀನ್ ಬೊಡ್ಡಿದಾಗ ಅದೆಷ್ಟು ಸಲ ಆಮ್ಲೆಟ್ ತಿಂದಿದ್ದೇವೆಯೋ ನೆನಪಿಲ್ಲ.ಆದರೆ ಅಲ್ಲಿನ ಊಟದ ರುಚಿಯನ್ನು ಮಾತ್ರ ಮರೆಯಲು ಸಾಧ್ಯವಿಲ್ಲ.

ಅದೆಷ್ಟೋ ಸಲ ಊಟಮುಗಿಸಿ ಕೈತೊಳೆದು ‘ ಶೆಟ್ರೆ,ಕಾಸಿಜ್ಜಿ ,ಎಲ್ಲೆ ಕೊರ್ಪೆ’ ಅಂತ ಹೇಳಿ ಬಂದದ್ದೂ ಇದೆ.ತುಂಬಾ ಜನ ಇದ್ದಾಗ ಅದು ನಮ್ಮದೇ ಮನೆಯಂತೆ ಭಾವಿಸಿ ಊಟದ ತಟ್ಟೆ ಹಿಡ್ಕೊಂಡು ನಾನೇ ಹಾಕಿಕೊಂಡು ಉಂಡು ಬಂದದ್ದಿದೆ.ಆದರೆ ಶೆಟ್ರು ಯಾವತ್ತೂ ಬೇಸರ ಮಾಡಿಕೊಂಡವರಲ್ಲ.ದುಡ್ಡಿಲ್ಲ ಎಂದು ಹೇಳಿದಾಗ ” ಮಲ್ಲೆತ್ತ್ ಪೋಲೆ” ಎಂದದ್ದೇ ಹೆಚ್ಚು.
ಪುಚ್ಚಮೊಗರುವಿನವರಾದ ಪ್ರಭಾಕರ ಶೆಟ್ರು ಈ ಹೊಟೇಲನ್ನು ಕಳೆದ 25 ವರ್ಷಗಳ ಕಾಲ ಮುನ್ನಡೆಸಿದ್ದಾರೆ.ತುಂಬಾ ಶ್ರಮಪಟ್ಟಿದ್ದಾರೆ.ಅವರಿಗೆ ಅವರ ಪತ್ನಿ,ಮಕ್ಕಳು ನೆರವಾಗಿ ಹೊಟೆಲ್ ನ ಯಶಸ್ಸಿಗೆ ಸಹಕರಿಸಿದ್ದಾರೆ.
ಮಳೆಗಾಲದಲ್ಲಿ ಈ ಹೊಟೆಲ್ ನಲ್ಲಿ ಕುಳಿತು ಬಿಸಿಬಿಸಿಯಾದ ಊಟ ಸೇವಿಸಿದ ನೆನಪನ್ನು ಮರೆಯಲು ಸಾಧ್ಯವಿಲ್ಲ.
ಅವರ ಹೊಟೆಲ್ ಸಿಬ್ಬಂದಿಗಳಿಗೆಂದು ಸಂಜೆ ನಾಲ್ಕರ ವೇಳೆಗೆ ಶೆಟ್ಟರ ಹೆಂಡತಿ ಚಾ ಮಾಡುತ್ತಿದ್ದರು. ನಾನು ‘ ಅಕ್ಕಾ’ ಅಂತ ಕರೆಯುತ್ತಾ ಅದೇ ಸಮಯಕ್ಕೆ ಹೋಗಿ ಚಾ ಕುಡಿದು ಬರುತ್ತಿದ್ದೆ.
ದಿ.ಸತೀಶ್ ಶೆಟ್ಟಿ, ಜಗ್ಗು ಬೆದ್ರ, ಶೆಟ್ಟರ ಸಂಬಂಧಿಕ ಅಂತ ಕೆಲವರು ಮಧ್ಯಾಹ್ನ ಊಟ ಬಡಿಸುವಲ್ಲಿ ಶೆಟ್ಟರಿಗೆ ನೆರವಾಗುತ್ತಿದ್ದರು.ಅದೂ ಕೂಡ ಇನ್ನು ನೆನಪು ಮಾತ್ರ.
ಹನ್ನೆರಡು ವರ್ಷಗಳ ಹಿಂದೆ ಇದೇ ಹೊಟೆಲ್ ನ ಒಂದು ಮೂಲೆಯಲ್ಲಿ ತೆರೆದುಕೊಂಡ ನಾರಾಯಣ ಅವರ ಕ್ಯಾಂಟಿನ್ ಈ ಪರಿಸರದವರಿಗೆ ಚಾ, ಕಟ್ಟಿಂಗ್ ಚಾ, ಇಡ್ಲಿ ಮುಂತಾದ ತಿಂಡಿಗಳೊಂದಿಗೆ ಅನುಕೂಲವಾಗಿತ್ತು.ಮಧ್ಯಾಹ್ನ ಬಿರಿಯಾನಿ ಕೂಡಾ ಸಿಗುತ್ತಿದ್ದು ತನ್ನದೇ ಆದ ಗ್ರಾಹಕರನ್ನು ನಾರಾಯಣ ಅವರು ಸೆಳೆದಿದ್ದರು.
ಇದೇ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶರಧಿ ಹೊಟೇಲನ್ನು ಮುಂದುವರಿಸುವ ಉದ್ದೇಶವನ್ನವರು ಇಟ್ಟುಕೊಂಡಿದ್ದಾರೆ.ಅವರಿಗೆ ಯಶಸ್ಸಾಗಲಿ ಎಂದು ಹಾರೈಸುತ್ತೇನೆ.
ಕಳೆದ 25 ವರ್ಷಗಳಲ್ಲಿ ಅದೆಷ್ಟೋ ಜನರ ಪಾಲಿಗೆ ಪ್ರೀತಿಯ ‘ಶರಧಿ ಹೋಟೆಲ್ ‘ ಆಗಿದ್ದ ಆ ಹೋಟೆಲ್ ಅವಧಿಮುಗಿದ ಬಳಿಕ ನಡೆದ ಏಲಮ್ ನಲ್ಲಿ ಗಣೇಶ್ ಶೆಟ್ಟರ ಪಾಲಾಗಿದೆ.ಅವರು ಕೂಡಾ ಒಂದು ಒಳ್ಳೆಯ ಸಸ್ಯಾಹಾರಿ ಹೊಟೇಲನ್ನು ಅದೇ ಶರಧಿಯಲ್ಲಿ ಮಾಡಿದರೆ ಯಶಸ್ಸು ಸಾಧಿಸುತ್ತಾರೆ.
ಪ್ರಭಾಕರ ಶೆಟ್ರು,ಅವರ ಸಾಧು ಸ್ವಭಾವ ಮತ್ತವರ ಸೇವೆಯನ್ನು ಮರೆಯಲಾಗದು.ಅವರಿಗೆ ಒಳ್ಳೆಯದಾಗಲಿ.
– ಅಶ್ರಫ್ ವಾಲ್ಪಾಡಿ






