ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಹಾಕಿ ಅವಹೇಳನ ಮಾಡಿರುವಾತನನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಗ್ರಹಿಸಿದ್ದಾರೆ.
‘ಬಿಲ್ಲವ ಸಂದೇಶ್ ‘ ಎನ್ನುವ ಪೇಜ್ ನಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋ ಹಾಕಿ ‘ ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನೂ ಅಗಲಿ ತೆರಳಿದ್ದಾರೆ, ಇವರ ಅಗಲಿಕೆಯನ್ನು ಭರಿಸುವ ಶಕ್ತಿ ಬ್ಲೂಜೆಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ’ ಎಂದು ಪೋಸ್ಟ್ ಮಾಡಲಾಗಿತ್ತು.

ಇಂತಹ ನೀಚತನಕ್ಕೆ ಯಾರೂ ಇಳಿಯಬಾರದಿತ್ತು, ರಾಜಕೀಯ,ಟೀಕೆಗಳು ಇದ್ದದ್ದೇ, ಆದರೆ ಓರ್ವ ದಲಿತ ಮಹಿಳೆಗೆ ಈ ರೀತಿಯ ಅವಹೇಳನ ಮಾಡಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲ, ಸಹೋದರಿ ಭಾಗೀರಥಿ ಅವರು ಗ್ರಾಮ ಪಂಚಾಯತ್ ನಿಂದ ಹಂತಹಂತವಾಗಿ ಮೇಲೆ ಬಂದು ಶಾಸಕಿಯಾಗಿ ಆಯ್ಕೆಯಾದವರು,ಈ ರೀತಿಯಲ್ಲಿ ಅವಹೇಳನ ಮಾಡಿರುವವನನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಮಾನಾಥ ಕೋಟ್ಯಾನ್ ಆಗ್ರಹಿಸಿದ್ದಾರೆ.






