ಈ ಮನುಷ್ಯನಿಗೆ ರಾತ್ರಿ ಪಗೆಲ್ ವ್ಯತ್ಯಾಸ ಗೊತ್ತಿಲ್ಲ. ಊರಲ್ಲಿ ಅಥವಾ ಎಲ್ಲೇ ಆಗಲಿ, ಯಾರಿಗೇನಾದರೂ ಆಯಿತೆಂದರೆ ಹೊಟೇಲ್ ಬಿಟ್ಟು ಥಟ್ಟನೆ ಎದ್ದು ಹೋಗುವಾತ.
ಎಲ್ಲೇ ಅಪಘಾತ ಸಂಭವಿಸಲಿ, ಯಾರಿಗಾದರೂ ಅನಾರೋಗ್ಯ ಉಂಟಾದ ವಿಷಯ ತಿಳಿದ ಕೂಡಲೇ ಅದೆಷ್ಟೇ ದೊಡ್ಡ ವ್ಯವಹಾರವಿದ್ದರೂ ಅದನ್ನೆಲ್ಲಾ ಬಿಟ್ಟು ತನ್ನ ಸಾಮಾಜಿಕ ಕಳಕಳಿಯ ಮಾನವೀಯ ಸೇವೆಗೆ ಮುಂದಾಗುವಾತ.ಮೊದಲು ಸೇವೆ-ನಂತರ ವ್ಯವಹಾರ ಎನ್ನುವ ತತ್ವವನ್ನು ಪಾಲಿಸಿಕೊಂಡು ಬರುತ್ತಾ ಅಪರೂಪದ ಜನಸೇವಕನೆನಿಸಿಕೊಂಡ ಈ ಕ್ಲೀನ್ ಶೇವ್ ನ ‘ವೈಟ್ ಮ್ಯಾನ್’ ಹೆಸರು ಸುರೇಶ್ ಅಂಚನ್.
ಶಿರ್ತಾಡಿ ಹಾಗೂ ಮೂಡುಬಿದಿರೆಯಲ್ಲಿ ಜಯಶ್ರೀ ಹೊಟೇಲ್ ಮೂಲಕ ಗಮನಸೆಳೆದಿರುವ ಸುರೇಶ್ ಅಂಚನ್ ಗೆ ಹೊಟೇಲ್ ನಲ್ಲಿ ಎಷ್ಟು ಹೆಸರಿದೆಯೋ ಅದಕ್ಕಿಂತ ಹೆಚ್ಚು ಸಾಮಾಜಿಕ ಸೇವಾ ಕ್ಷೇತ್ರದಲ್ಲಿದೆ.
ಮರೋಡಿಯವರಾಗಿರುವ ಸುರೇಶ್ ಅಂಚನ್ ಎಸ್ಸೆಸ್ಸೆಲ್ಸಿ ಮುಗಿದ ಕೂಡಲೇ ದೂರದ ಮುಂಬಯಿಗೆ ಪಯಣ ಬೆಳೆಸಿ ಅಲ್ಲೂ ಕೆಲಕಾಲ ಯಶಸ್ವಿ ಉದ್ಯಮಿಯಾಗಿ ತನ್ನೂರಿನ ಅಶಕ್ತರಿಗೆ,ಬಡವರಿಗೆ ತನ್ನಿಂದಾದ ಸಹಕಾರವನ್ನು ನೀಡುತ್ತಾ ಬಂದವರು.
ಊರಿಗೆ ಬಂದು ಹೊಟೇಲ್ ಉದ್ಯಮವನ್ನೇ ಮುಂದುವರಿಸಿಕೊಂಡು ಮೂಡುಬಿದಿರೆ ಹಾಗೂ ಶಿರ್ತಾಡಿಯಲ್ಲಿ ಜಯಶ್ರೀ ಹೊಟೇಲ್ ಗಳಿಗೆ ಹೊಸರೂಪ ಕೊಟ್ಟು ಜನಪ್ರಿಯಗೊಳಿಸಿದವರು.
ಹೊಟೇಲ್ ಉದ್ಯಮದೊಂದಿಗೆ ಕೃಷಿಯಲ್ಲೂ ತೊಡಗಿಸಿಕೊಂಡು ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ತಾನು ಕಲಿತ ಮರೋಡಿ ಶಾಲೆಯ ಅಭಿವೃದ್ಧಿಗಾಗಿ, ಶಿರ್ತಾಡಿ ಮಕ್ಕಿ ಹೈಸ್ಕೂಲ್ ನ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಪಟ್ಟಿದ್ದಾರೆ.ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ತನ್ನ ಅಚಲವಾದ ನಿರ್ಧಾರದೊಂದಿಗೆ ಅದಕ್ಕೆ ಬೇಕಾದ ಸೌಲಭ್ಯಗಳಿಗಾಗಿ ಜಿಲ್ಲೆ,ರಾಜ್ಯದ ನಾಯಕರನ್ನು ಭೇಟಿ ಮಾಡಲು ತನ್ನ ವ್ಯವಹಾರವನ್ನು ಬಿಟ್ಟು ,ಸಾಕಷ್ಟು ಓಡಾಡಿದ್ದಾರೆ.
ಸಾಮಾಜಿಕವಾಗಿಯೂ ಶಿರ್ತಾಡಿ- ಮೂಡುಬಿದಿರೆ ಪರಿಸರದಲ್ಲಿ ದೊಡ್ಡ ಹೆಸರು ಮಾಡಿಕೊಂಡಿರುವ ಸುರೇಶ್ ಅಂಚನ್ ಗೆ ಪಕ್ಷ ಬೇಧವಿಲ್ಲ, ಜಾತಿ ಬೇಧವಿಲ್ಲ. ಹಾಗಾಗಿಯೇ ಜನರಿಂದ ‘ ನಮ್ಮ ಸುರೇಶೆ’ ಅಂತ ಕರೆಸಿಕೊಂಡದ್ದು.
ಅದೆಷ್ಟೋ ಅಸಹಾಯಕರಿಗೆ ನೆರವಾಗಿ, ಬಡರೋಗಿಗಳನ್ನು ರಾತ್ರಿ ಹಗಲೆನ್ನದೆ ಆಸ್ಪತ್ರೆಗೆ ಸಾಗಿಸಿ ನೆರವಾಗುವ ಮೂಲಕ ಆಪತ್ಬಾಂಧವನಾಗಿ, ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ,ತನ್ನ ಹಿರಿಯರು ನಡಸಿಕೊಂಡು ಬಂದ ಕೃಷಿಯನ್ನು ಮುಂದುವರಿಸುತ್ತಾ ಓರ್ವ ಉತ್ತಮ ಕೃಷಿಕನಾಗಿ, ಧಾರ್ಮಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರದ ಸೇವಕನಾಗಿರುವ ಸುರೇಶ್ ಅಂಚನ್ ಅವರಿಗಿಂದು ಶಿರ್ತಾಡಿಯಲ್ಲಿ ಸನ್ಮಾನ.
ಶಿರ್ತಾಡಿಯಲ್ಲಿ ಸಂದೀಪ್ ಸಾಲ್ಯಾನ್ ಅವರ ಸಾರಥ್ಯದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಕರಾವಳಿ ಫ್ರೆಂಡ್ಸ್ ಸರ್ಕಲ್ ಎಂಬ ಸಂಘಟನೆಯ ಮೂಲಕ ಯಕ್ಷಗಾನ ಬಯಲಾಟ ನಡೆಯುತ್ತಿದೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಸಂದೀಪ್ ಸಾಲ್ಯಾನ್ ಮತ್ತವರ ತಂಡ ಮಾಡುತ್ತಿದೆ.
ಈವರ್ಷ ಸುರೇಶ್ ಅಂಚನ್ ಅವರ ಎಲ್ಲಾ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಿದೆ.
ರಾತ್ರಿ 7- 30 ಕ್ಕೆ ಶಿರ್ತಾಡಿ ಬಸ್ ನಿಲ್ದಾಣ ಬಳಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುರೇಶ್ ಅಂಚನ್ ಅವರನ್ನು ಮತ್ತು ಇನ್ನೋರ್ವ ಸಮಾಜ ಸೇವಕ ವಿಲ್ಫ್ರೆಡ್ ಪಿಂಟೊ ಅವರನ್ನು ಸನ್ಮಾನಿಸಲಾಗುವುದೆಂದು ಕರಾವಳಿ ಫ್ರೆಂಡ್ಸ್ ಸರ್ಕಲ್ ನ ಸಂಚಾಲಕರಾದ ಸಂದೀಪ್ ಸಾಲ್ಯಾನ್ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮ ಬಳಿಕ ಗೆಜ್ಜೆಗಿರಿ ಮೇಳದವರಿಂದ ‘ ನಾಗರತಿ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
‘ನಮ್ಮ ಸುರೇಶ’ ಎಂದೇ ಜನಪ್ರಿಯರಾಗಿರುವ ಸುರೇಶ್ ಅಂಚನ್ ಅವರ ಸಾಮಾಜಿಕ ಸೇವಾ ಕೆಲಸಗಳು ಸದಾ ಮುಂದುವರಿಯುತ್ತಿರಲಿ, ಅವರಿಗೆ ಯಶಸ್ಸಾಗಲಿ ಎಂಬ ಹಾರೈಕೆ.





