ಶಿರ್ತಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡ ‘ ಮೈತ್ರಿ ಸೌಧ’ ( ವಾಣಿಜ್ಯ- ವಸತಿ ಹಾಗೂ ಸಹಕಾರಿಯ ಕೇಂದ್ರ ಕಚೇರಿ) ದ ಉದ್ಘಾಟನೆಯು ಫೆ.8 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ವಿ.ಶೆಟ್ಟಿ ಅವರು ತಿಳಿಸಿದ್ದಾರೆ.
ಸಂಜೆ 5-30ಕ್ಕೆ ನಡೆಯುವ ಸಮಾರಂಭದಲ್ಲಿ ಮೈತ್ರಿ ಸೌಧದ ಕಟ್ಟಡವನ್ನು ಶಿರ್ತಾಡಿ ಭುವನಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜ ಅವರು ಉದ್ಘಾಟಿಸಲಿದ್ದು ನ್ಯಾಯವಾದಿ ಮಯೂರಕೀರ್ತಿ ಅವರು ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ದ.ಕ.ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ,ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ,ಮಾತೃಭೂಮಿ ಸೌಹಾರ್ದ ಸಹಕಾರಿ,ಕೈಕಂಬ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು,ಶ್ರೀಮತಿ ಹೆಲೆನ್ ಮರಿಯಾ ಲೋಬೋ ಕುಕ್ಕೆತ್ತೋಡಿ ಹಾಗೂ ಶ್ರೀಮತಿ ಆಶಾ ಸುರೇಶ್ ನಾರಾವಿ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ‘ಅಮ್ಮು….ಆಮುಂಡರಾ?’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.










