-ಅಶ್ರಫ್ ವಾಲ್ಪಾಡಿ
ಸೈಟ್,ಬಿಲ್ಡಿಂಗ್ ಅಂತ ಕೃಷಿಭೂಮಿ,ಗದ್ದೆಗಳಿಗೆ ಎಲ್ಲಿಂದಲೋ ಲೋಡ್ ಲೋಡ್ ಮಣ್ಣು ತರಿಸಿ ಇದ್ದ ಗದ್ದೆಗಳನ್ನು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಂದಿಷ್ಟು ಕೃಷಿಕರು ಯಾವುದೇ ಯಂತ್ರಗಳನ್ನು ಕಾಯದೆ ಮನೆಯೆದುರಿನ ಜಾಗವನ್ನು ಸಮತಟ್ಟುಗೊಳಿಸಿ ಹಾರೆ ಪಿಕ್ಕಾಸಿನ ಮೂಲಕವೇ ಸುಂದರವಾದ ಗದ್ದೆಯನ್ನು ನಿರ್ಮಿಸಿ ಸಾಹಸ ಮೆರೆದಿದ್ದಾರೆ.
ಯಂತ್ರಗಳ ಸಹಾಯವಿಲ್ಲದೆ ಗತಕಾಲದಂತೆ ಮಾನವ ನಿರ್ಮಿತ ಗದ್ದೆಯನ್ನು ಈಗಲೂ ಮಾಡಬೇಕೆನ್ನುವುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.
ಈ ಸಾಹಸಮಯ ಕೆಲಸ ನಡೆದದ್ದು ಶಿರ್ತಾಡಿಯ ಕಂದಿರುವಿನ ಜೆ.ಎನ್.ಎಸ್. ಮನೆಯೆದುರು.



ಗುತ್ತಿಗೆದಾರನಾಗಿ, ಸಾಮಾಜಿಕ ಸೇವಕನಾಗಿ ಸಾಕಷ್ಟು ಗಮನಸೆಳೆದಿರುವ ಜೆ.ಎನ್.ಎಸ್.ಕನ್ಸ್ಟ್ರಕ್ಷನ್ಸ್ ನ ಮಾಲಕರಾಗಿರುವ ಸುರೇಂದ್ರ ಕೆ.ಅವರ ಮನೆ ಮುಂದೆ ಒಂದಿಷ್ಟು ಜಾಗವಿತ್ತು. ಉದ್ಯಮದೊಂದಿಗೆ ತಮ್ಮ ಕೃಷಿ ಚಟುವಟಿಕೆಯ ಮೇಲಿನ ಪ್ರೀತಿ ಇಟ್ಟುಕೊಂಡಿರುವ ಸುರೇಂದ್ರ ಅವರಿಗೆ ತಮ್ಮ ಮನೆ ಮುಂದೆಯೇ ಒಂದು ಗದ್ದೆ ಬೇಕೆಂಬ ಹಂಬಲವಿತ್ತು. ಇವರ ತಂದೆ ಕೂಡಾ ಉತ್ತಮ ಕೃಷಿಕರಾಗಿ ಹಲವು ಪುರಸ್ಕಾರಗಳನ್ನು ಗಳಿಸಿದ್ದವರು. ಕೊನೆಗಾಲದವರೆಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರು.
ಹಾಗಾಗಿ ತಾನೂ ಅದೇ ಹಾದಿಯಲ್ಲಿ ಮುಂದುವರಿಯಬೇಕೆಂಬ ಇಚ್ಚೆಯಿಂದ ಮನೆ ಮುಂದಿನ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದರು. ಆದರೆ ಕೆಲವು ಕಲ್ಲು, ಮಣ್ಣು ಎಂದು ಬಾಕಿಯಾಗಿತ್ತು.


ಜಾಗ ಸಮತಟ್ಟಾಗಿ ಒಂದು ಗದ್ದೆಯ ರೂಪಕ್ಕೆ ಬರಬೇಕಾದರೆ ಅದಕ್ಕೆ ಟ್ರ್ಯಾಕ್ಟರ್ ನ ಅಗತ್ಯವಿದೆ.
ಟ್ರ್ಯಾಕ್ಟರ್ ನವರು ‘ ಇನಿ ಬರ್ಪೆ, ಎಲ್ಲೆ ಬರ್ಪೆ’ ಎಂದು ದಿನ ದೂಡಿದರೇ ವಿನಹ ಕಂದಿರುವಿನ ಹಾದಿಗೆ ಹೋಗಲೇ ಇಲ್ಲ.
ಟ್ರ್ಯಾಕ್ಟರ್ ನ ಹಾದಿ ನೋಡಿ ಸುಸ್ತಾದ ಸುರೇಂದ್ರ ಅವರು ತಮಗೆ ಬೇಕಾದವರನ್ನು ಬರಲು ಹೇಳಿ ಹಾರೆ ಪಿಕ್ಕಾಸನ್ನು ಕೈಗೆತ್ತಿಕೊಂಡರು. ಅವರ ತಾಯಿ ನೀಲಮ್ಮ ಪೂಜಾರ್ತಿ ಮತ್ತು ಕುಟುಂಬದ ಹಿರಿಯರೂ, ಕೃಷಿಕರೂ ಆದ ಶಿವಪ್ಪ ಪೂಜಾರಿಯವರು ಈ ಕೆಲಸಕ್ಕೆ ಮುಹೂರ್ತ ನೆರವೇರಿಸಿದರು.
ಹಾರೆ ಪಿಕ್ಕಾಸಿನ ಮೂಲಕವೇ ನಾಲ್ಕು ದಿನಗಳಲ್ಲಿ ಕೆಲಸ ಮಾಡಿ ಒಂದು ಸುಂದರವಾದ ಗದ್ದೆ ನಿರ್ಮಿಸಿ ಮಾದರಿಯಾಗುವ ಜೊತೆಗೆ ಇತರರೂ ಈ ಮನೆಯೆದುರಿನ ಗದ್ದೆಯನ್ನು ನೋಡುವಂತೆ ಮಾಡಿ ಸೈ ಎನಿಸಿಕೊಂಡಿದ್ದಾರೆ.ಒಂದು ರೌಂಡ್ ಗದ್ದೆ ಊಳುವ ಕೆಲಸವನ್ನೂ ಮಾಡಿ ಮುಗಿಸಿ ನೇಜಿ ನೆಡುವ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ.
ಕೃಷಿ, ಗದ್ದೆಯ ಕೆಲಸ ಅಂತ ದೂರಕ್ಕೆ ಸರಿಯುವ ಇಂದಿನ ಯುವಜನತೆಯೆದುರು ಮನಸ್ಸು ಮಾಡಿದರೆ ಏನೂ ಸಾಧನೆ ಮಾಡಬಹುದೆನ್ನುವುದನ್ನು ಮಾಡಿ ತೋರಿಸಿದ್ದಾರೆ ಸುರೇಂದ್ರ.
ಉದ್ಯಮಿಯಾಗಿ,ಕೃಷಿಕನಾಗಿ ಇನ್ನಷ್ಟು ಸಾಧನೆ ಮಾಡುತಾಗಲಿ ಎಂಬ ಹಾರೈಕೆ ನಮ್ಮದು.










