ಸದಾ ಸಾಮಾಜಿಕ ಸೇವೆಯ ಮೂಲಕ ಶಿರ್ತಾಡಿ ಹಾಗೂ ಸುತ್ತಮುತ್ತಲಿನ ಪರಿಸರಗಳಲ್ಲಿ ‘ಆಪತ್ಬಾಂಧವ’ನಾಗಿ ಗುರುತಿಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿರುವ ಶಿರ್ತಾಡಿಯ ಸೂರಜ್ ಕುಮಾರ್ ಜೈನ್ ಅವರನ್ನು ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ನಡೆದ ಲಯನ್ಸ್ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆದಿದ್ದು ಕ್ಲಬ್ ನ ಹಿಂದಿನ ಅಧ್ಯಕ್ಷ ಹರ್ಮನ್ ರೋಡ್ರಿಗಸ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರನ್ನೂ ಸನ್ಮಾನಿಸಲಾಯಿತು.
ನೆಲ್ಲಿಗುಡ್ಡೆಯ ವಿಕಲಚೇತನ ಸದಸ್ಯನಿರುವ ಕುಟುಂಬವೊಂದಕ್ಕೆ ಕ್ಲಬ್ ವತಿಯಿಂದ 35 ಸಾವಿರ ರೂ.ವೆಚ್ಚದಲ್ಲಿ ಸ್ಥಾಪಿಸಲಾದ ಸೋಲರ್ ವಾಟರ್ ಹೀಟರ್ ಶಾಶ್ವತ ಯೋಜನೆಯನ್ನು ಜಿಲ್ಲಾ ಗವರ್ನರ್ ಲ.ಕುಡ್ಪಿ ಅರವಿಂದ ಶೆಣೈ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೆಣೈ ಅವರು ‘ಅಲಂಗಾರು ಲಯನ್ಸ್ ಕ್ಲಬ್ ನಡೆಸುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ಶ್ಲಾಘಿಸಿ ಸದಸ್ಯತ್ವದಲ್ಲಿ 50% ಏರಿಕೆಯ ಸಾಧನೆ ಮಾಡಿದ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವ ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂತೀಯ ಅಧ್ಯಕ್ಷ ಲ.ಜಗದೀಶ್ಚಂದ್ರ ಡಿ.ಕೆ, ವಲಯ ಒಂದರ ಅಧ್ಯಕ್ಷ ಮೆಲ್ವಿನ್ ಸಲ್ದಾನ, ವಲಯ ಎರಡರ ಅಧ್ಯಕ್ಷ ಜೊಸ್ಸಿ ಮಿನೇಜಸ್,ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವ ಅವರು ಸ್ವಾಗತಿಸಿ ಕಾರ್ಯದರ್ಶಿ ರಿಚರ್ಡ್ ಡಿಸೋಜ ವಂದಿಸಿದರು.
ಮನೋಹರ್ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.





