ಮಾಂಟ್ರಾಡಿ ಕ್ರಾಸ್ ರಸ್ತೆಯ ದುರಾವಸ್ಥೆಯಿದು! *ಶಾಸಕರ 10 ಲಕ್ಷ ಅನದಾನ ಬಂದರೂ ಕಂದಾಯ ಇಲಾಖೆಯ ನಿರ್ಲಕ್ಷ್ಯ

Picture of Namma Bedra

Namma Bedra

Bureau Report

ಇದು ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕ್ರಾಸ್ ( ಕೈಕಂಬ) ರಸ್ತೆಯ ಅವಸ್ಥೆ. ಮೊದಮೊದಲ ಮಳೆಗೇ ರಸ್ತೆಯುದ್ದಕ್ಕೂ ಹೊಂಡಗಳೇ ಹೆಚ್ಚಿರುವ ಈ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ಕಷ್ಟವಾಗಿದೆ.
ಈ ರಸ್ತೆಯನ್ನು ಸರಿಪಡಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದ್ದಲ್ಲ. ಯಾಕೆಂದರೆ ಈ ರಸ್ತೆ ದಾಟಿ ಹೋಗುವವರ ಸಂಖ್ಯೆ, ಆಕಡೆಯಿಂದ ಹೊಸ್ಮಾರು,ಕಾರ್ಕಳ, ಮೂಡುಬಿದಿರೆಗೆ ಹೋಗುವವರ ಸಂಖ್ಯೆ ದೊಡ್ಡದಿದೆ.


‌ ಸಾಕಷ್ಟು ಮಂದಿ ವಿದ್ಯಾರ್ಥಿಗಳು, ಕೂಲಿ ಕೆಲಸಗಾರರು, ಉದ್ಯೋಗಿಗಳು, ಮಹಿಳೆಯರು ಅಂತ ಪ್ರತಿನಿತ್ಯ ಈ ಹೊಂಡಾಗುಂಡಿಯ ರಸ್ತೆಯಲ್ಲಿ ಸಂಚರಿಸುತ್ತಾರೆ.
ಇವರೆಲ್ಲರಿಗೂ ನಡೆದು ಹೋಗಲು, ವಾಹನಗಳಲ್ಲಿ ಹೋಗಲು ಕಷ್ಟವಾಗುತ್ತಿದೆಯಾದರೂ ‘ಯಾರಲ್ಲಿ ಹೇಳಲಿ’ ಅಂತ ಪಂಚಾಯತನ್ನೇ ನೆನೆದು ಬಯ್ಯುತ್ತಾ ಹೋದವರೇ ಹೆಚ್ಚು. ಆದರೆ ಪಂಚಾಯತ್ ನವರೇನೂ ಸುಮ್ಮನಿರಲಿಲ್ಲ.ಅದ್ಯಾವುದೋ ಖಾಸಗಿ ಜಾಗ ಅಂತ ತಕರಾರು ಬಂದಾಗ ಆ ಜಾಗದ ಉಸಾಬರಿಗೆ ಹೋಗದೆ ಸರಕಾರಿ ಜಾಗದಲ್ಲಿರುವ ರಸ್ತೆ ಅಭಿವೃದ್ಧಿಗೆ ಪಂಚಾಯತ್ ನಲ್ಲಿ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ನೀಡಿದ್ದಾರೆ.‌


‌‌ ಶಾಸಕ ಉಮಾನಾಥ ಕೋಟ್ಯಾನ್ ಅವರು ಹತ್ತು ಲಕ್ಷ ರೂ.ಅನುದಾನವನ್ನು ಈ ರಸ್ತೆಯ ಅಭಿವೃದ್ಧಿಗೆ ನೀಡಿದ್ದರು.
ಇಷ್ಟೆಲ್ಲಾ ಆದರೂ ಕಂದಾಯ ಇಲಾಖೆಯವರು ಮುಂದೆ ಬರುತ್ತಿಲ್ಲ ಎಂಬ ಆರೋಪವಿದೆ.ಹಣ ಇರುವಾಗ ಸಾರ್ವಜನಿಕರಿಗೆ ಉಪಕಾರ ಆಗುವಂತಹ ಕೆಲಸಗಳನ್ನು ಆದ್ಯತಾ ನೆಲೆಯಲ್ಲಿ ಮಾಡಬೇಕಾದವರು, ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಮೌನ ವಹಿಸಿರುವುದೇಕೆ ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಕೆಲವರು.
ಸಾರ್ವಜನಿಕರು ರಸ್ತೆಗೆ ಬಂದು ಪ್ರತಿಭಟನೆ ಮಾಡುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಈ ರಸ್ತೆಯ ಅಭಿವೃದ್ಧಿ ಕಡೆಗೆ ಗಮನಕೊಡುವುದೊಳ್ಳೆಯದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top