ಕಳೆದ ಶನಿವಾರ ಸಂಜೆ ಮೂಡುಬಿದಿರೆ ಬಸ್ ನಿಲ್ದಾಣದ ಮೊಬೈಲ್ ಅಂಗಡಿಗೆ ನುಗ್ಗಿ ತಲವಾರು ಶೋ ಮಾಡಿದ ಯುವಕ ಜೈಲು ಸೇರಿದ್ದಾನೆ.
ವಾಮದಪದವು ಮೂಲದವನಾಗಿದ್ದು ಪ್ರಸ್ತುತ ಪೆರಿಂಜೆ ಸಮೀಪದ ಬಡಕೋಡಿ ಎಂಬಲ್ಲಿ ವಾಸವಿರುವ ರಾಜೇಶ ಎಂಬ ಯುವಕ ತನ್ನ ಪಿಡ್ಕ್ ನಿಂದಾಗಿ ಜೈಲು ಸೇರಿದವನು.
ಈತ ಶನಿವಾರ ಸಂಜೆಯ ವೇಳೆಗೆ ಬೆದ್ರ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಹೋಗಿ ಮೊಬೈಲ್ ಕೊಡುವಂತೆ ತಲವಾರು ಬೀಸಿದ್ದಾನೆ.ಕೆಲಕಾಲ ಆತಂಕ ಸೃಷ್ಟಿಸಿದ್ದ ಈ ಯುವಕನನ್ನು ಅಲ್ಲಿನ ಮೊಬೈಲ್ ಅಂಗಡಿಯ ಯುವಕರೇ ಉಪಾಯದಿಂದ ಲಾಕ್ ಮಾಡಿ ಪೊಲೀಸರಿಗೊಪ್ಪಿಸಿದ್ದರು.
ಸಂದೇಶ ಎಂಬವ ತನಗೆ ತಲವಾರು ನೀಡಿದ್ದು ಎಂದು ಮೊದಲಿಗೆ ಹೇಳಿದ್ದರಿಂದ ಸಂದೇಶನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಾರೆ.ಆದರೆ ಸಂದೇಶನಿಗೂ ಇವನಿಗೂ ಯಾವ ಸಂಬಂದವೂ ಇಲ್ಲವೆನ್ನಲಾಗಿದೆ.
ಕುಡಿದು ಟೈಟಾಗಿ ಇಂತಹ ಕಿತಾಪತಿ ಮಾಡಲು ಹೋಗಿ ಎಲ್ಲಿಗೋ ಹೋಗಿದ್ದಾನೆ.ಎರಡು ದಿನದ ಹಿಂದೆ ಪಕ್ಕದ ಬಿಸಿರೋಡಲ್ಲಿ ಯುವಕನೊಬ್ಬ ತಲವಾರಿನಿಂದ ಯುವತಿಯೊಬ್ಬಳನ್ನು ಕೊಚ್ಚಿಕೊಂದಿದ್ದ.ಎರಡೇ ದಿನದ ಅಂತರದಲ್ಲಿ ಬೆದ್ರದಲ್ಲಿ ಈ ಘಟನೆ ನಡೆದಾಗ ಸಹಜವಾಗಿಯೇ ಜನರು ಆತಂಕಕ್ಕೊಳಗಾಗಿದ್ದರು.
ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಆತನ ಪಿಡ್ಕಾಯಣ ಗೊತ್ತಾಗಿದೆ.
ಮರುದಿನ ಬೆಳಿಗ್ಗೆ ಅಮಲು ಜಾರಿದಾಗ ‘ ನನ್ನನ್ನು ಮನೆಗೆ ಕಳುಹಿಸಿ’ ಎಂದಿದ್ದಾನಂತೆ.ಆದರೆ ಪೊಲೀಸರು ಮನೆಗೆ ಕಳುಹಿಸದೆ ಆ ತಲವಾರನ್ನು ಜೈಲಿಗೆ ಕಳಿಸಿದ್ದಾರೆ.






