ಸೆಪ್ಟೆಂಬರ್ 18, 2026. ತುಳುನಾಡಿನ ಜನರು ಈ ದಿನವನ್ನು ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ,ಮುಖ್ಯಮಂತ್ರಿಯವರು ಮಂಗಳೂರಿನಲ್ಲಿ ಕ್ಯಾಬಿನೆಟ್ ನಡೆಸಿರುವುದು ಮತ್ತು ಅದೇ ಕ್ಯಾಬಿನೆಟ್ ನಲ್ಲಿ ತುಳುಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿರುವುದು ಕರಾವಳಿಯ ಜನತೆಯ ಪಾಲಿಗೆ ಐತಿಹಾಸಿಕ ದಿನ.ಈ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಪ್ರತೀ ವರ್ಷ ಈ ದಿನವನ್ನು ಸರ್ವರನ್ನೂ ಸೇರಿಸಿಕೊಂಡು ‘ತುಳುವೆರೆ ಪರ್ಬ’ ( ತುಳುನಾಡಿನ ಹಬ್ಬ) ವನ್ನಾಗಿ ಆಚರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ 322 ಚದರ ಕಿ.ಮೀ ವಿಸ್ತೀರ್ಣವಿರುವ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಬಜೆಟ್ ಮಂಡಿಸಿ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಸ್ತ ತುಳುವರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ತಂಬಾ ಮಂದಿ ಮುಖ್ಯಮಂತ್ರಿಗಳಾಗಿ ಬಂದು ಹೋಗಿದ್ದಾರೆ,ಕರಾವಳಿ ಭಾಗದವರೇ ಮುಖ್ಯಮಂತ್ರಿಗಳಾಗಿದ್ದರು,ಆದರೆ ತುಳು ಭಾಷೆಯ ಬಗ್ಗೆ,ತುಳುನಾಡಿನ ಬಗ್ಗೆ,ಇಲ್ಲಿನ ಜನರ ಬಗ್ಗೆ, ಇಲ್ಲಿನ ಸಂಸ್ಕೃತಿಯ ಬಗ್ಗೆ ವಿಶೇಷ ಪ್ರೀತಿ ತೋರಿ ತುಳುಭಾಷೆಗೆ ಮಾನ್ಯತೆ ಕೊಟ್ಟವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದ ಅವರು ತುಳು ಭಾಷೆಗೆ ಹೋರಾಡಿದ ಹಲವಾರು ಪ್ರಮುಖರಿಗೆ,ಸಂಘ ಸಂಸ್ಥೆಗಳಿಗೂ ಕೃತಜ್ಞತೆ ಸಲ್ಲಿಸಿದರು.
ತುಳು ಭಾಷೆ 8 ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕಾದರೆ ಎರಡನೇ ಭಾಷೆಯಾಗಿ ಮಾನ್ಯತೆ ಪಡೆಯುವುದೂ ಪ್ರಮುಖವಾಗಿತ್ತು, ಇದಕ್ಕೆ ನಿನ್ನೆಯ ದಿನ ನಾಂದಿ ಹಾಡಿದ್ದೇವೆ, ನಿನ್ನೆಯ ಐತಿಹಾಸಿಕ ದಿನವೂ ತುಳು ಭಾಷೆ ಎಂಟನೇ ಪರಿಚ್ಚೇದಕ್ಕೆ ಸೇರ್ಪಡೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು
ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ, ಆರೋಗ್ಯ, ಸಾಮರಸ್ಯದ ಬದುಕು,ಮಠ ಮಂದಿರಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಡಿ.ಕೆ.ಶಿ.ಅವರು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ,ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದ ಅವರು ಮುಂದಿನ ತಿಂಗಳಿನಿಂದ ಈ ಕ್ಷೇತ್ರದ ಪ್ರತೀ ಮನೆಮನೆಗಳಿಗೆ ನಮ್ಮ ಕಾರ್ಯಕರ್ತರು ತೆರಳಿ ತುಳು ಲಾಂಛನವನ್ನು ಅಂಟಿಸಲಿದ್ದಾರೆ,ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಯೂತ್ ಕಾಂಗ್ರೆಸ್ ಅಧ್ಯಕ್ಷ ಅನಿಶ್ ಡಿಸೋಜ, ಪ್ರವೀಣ್ ಪೂಜಾರಿ ಇರುವೈಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.








































