ಮಂಗಳೂರು-ಮೂಡುಬಿದಿರೆ-ಕಾರ್ಕಳ ರಸ್ತೆಯಲ್ಲಿ ಸರಕಾರಿ ಬಸ್ ಪ್ರಾರಂಭವಾಗಬೇಕು, ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟಿನ್ ಶೀಘ್ರದಲ್ಲೇ ಪ್ರಾರಂಭವಾಗಬೇಕೆಂದು ಒತ್ತಾಯಿಸುತ್ತಾ ಬಂದವರು ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ,ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಒಬ್ಬ ಮಾತ್ರ. ಉಳಿದಂತೆ ಹಾಲಿ-ಮಾಜಿಗಳಿಗೆ ಈ ವಿಷಯದಲ್ಲಿ ಆಸಕ್ತಿ ಇದ್ದಂತಿಲ್ಲ.ಯಾವೊಬ್ಬ ಜನಪ್ರತಿನಿಧಿ ಕೂಡಾ ಈ ಎರಡು ವಿಷಯಗಳಲ್ಲಿ ಒಂದೇ ಒಂದು ಧ್ವನಿ ಎತ್ತದಿರುವುದು ಕೆಲವು ಸಂಶಯಗಳಿಗೆ ಕಾರಣವಾಗಿದೆ.
ನಿಜವಾಗಿಯಾದರೂ ಈ ರಸ್ತೆಯಲ್ಲಿ ಸರಕಾರಿ ಬಸ್ ಚಾಲು ಆದರೆ ಅದೆಷ್ಟೋ ಬಡ ಜನರಿಗೆ, ಮಹಿಳೆಯರಿಗೆ,ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. ಇಂದಿರಾ ಕ್ಯಾಂಟಿನ್ ಪ್ರಾರಂಭವಾದರೂ ಬಡ ಜನರಿಗೆ ತುಂಬಾ ಪ್ರಯೋಜನವಾಗುತ್ತದೆ.ಆದರೆ ಈ ಎರಡು ವಿಷಯಗಳ ಕುರಿತು ಅತ್ಯಧಿಕ ಪ್ರಶ್ನೆ ಮಾಡುತ್ತಿರುವವರು, ಶೀಘ್ರ ಪ್ರಾರಂಭಕ್ಕಾಗಿ ಹೋರಾಡುತ್ತಿರುವುದು ಅರುಣ್ ಶೆಟ್ಟಿ ಒಬ್ಬ ಮಾತ್ರ.
ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಮಹತ್ತರ ಯೋಜನೆಗಳಲ್ಲಿ ಇದು ಎರಡು ಯೋಜನೆಗಳು ಕೂಡಾ ಮಹತ್ವದ್ದೇ.ಮತ್ತು ಜನಪ್ರಯೋಜನಕಾರಿ ಯೋಜನೆಗಳು. ಆದರೆ ಶೀಘ್ರ ಅನುಷ್ಠಾನಕ್ಕಾಗಿ ಶ್ರಮಿಸಬೇಕಾದವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಅಭಿವೃದ್ಧಿ ಎಂದರೆ ರಸ್ತೆ,ಚರಂಡಿ ಮಾತ್ರವಲ್ಲ.ಇಂತಹ ಯೋಜನೆಗಳು ಆರಂಭವಾದರೆ ಅದು ಅಭಿವೃದ್ಧಿಯೇ ಆಗುತ್ತದೆ.ಆದರೆ ಮೌನವಹಿಸಿದವರು ಇದನ್ನು ಅಭಿವೃದ್ಧಿ ಎಂದು ಒಪ್ಪಲು ತಯಾರಿಲ್ಲವಾ ? ಎನ್ನುವ ಪ್ರಶ್ನೆ ಕೂಡಾ ಕಾಡುತ್ತಿದೆ.
ವಿಪರ್ಯಾಸವೆಂದರೆ ವಿರೋಧ ಪಕ್ಷದವರು ಕೂಡಾ ಒಂದೇ ಒಂದು ಸಲ ‘ ಏಪ ಓಪನ್’? ಎಂದು ಓಪನ್ ಆಗಿ ಕೇಳಿಲ್ಲ.ಅವರು ಕೇಳುವುದೂ ಇಲ್ಲ.
ಕೆಲವರು ಮಾತ್ರ ಅರುಣ್ ಶೆಟ್ಟಿ ಅವರಲ್ಲಿ “ಬಸ್ ಏಪ ಬರ್ಪುಂಡುಯೇ, ಕ್ಯಾಂಟಿನ್ ಡ್ ಏಪ ಚಾ ತಿಕ್ಕುಂಡುಯೇ” ಎಂದು ಕೇಳುತ್ತಿರುತ್ತಾರೆ. ಅದು ಕಾಳಜಿಯ ಪ್ರಶ್ನೆಯೋ, ಮಕ್ಕರ್ ಮಾಡುವುದೋ.. ಅರ್ಥವಾಗುತ್ತಿಲ್ಲ.
ಪ್ರಸ್ತಾವಿತ ಈ ಎರಡು ಯೋಜನೆಗಳು ಅತಿ ಶೀಘ್ರದಲ್ಲಿ ಪ್ರಾರಂಭವಾಗಬೇಕೆನ್ನುವುದೇ ಮೂಡುಬಿದಿರೆ ಜನರ ಆಗ್ರಹವಾಗಿದೆ.






